ಪತ್ರಿಕಾಗೋಷ್ಟಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾಹಿತಿ
ಶಿವಮೊಗ್ಗ : ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ ಬಿಡಿಸಿ ಕೊಡಬೇಕೆಂದು ಒತ್ತಾಯಿಸಿ ಅ.28 ರಂದು ಬೆಳಗ್ಗೆ 11.00 ಗಂಟೆಗೆ ಡಿಎಸ್‍ಎಸ್ ಕಚೇರಿಯಿಂದ ಡಿಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಹೋಬಳಿ ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ.15 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ 49 ಕುಟುಂಬಗಳಿಗೆ ಮಂಜೂರಾದ ಭೂಮಿಯನ್ನು ಬಲಿಷ್ಟ ಜಾತಿ, ವರ್ಗದವರು ಭೂಮಿಯ ಸ್ವಾಧೀನದಿಂದ ಒಕ್ಕಲೆಬ್ಬಿಸಿದ್ದು, ಇದು ಅತ್ಯಂತ ಖಂಡನೀಯ ಎಂದರು.
ಸರ್ವೆ ನಂ.15 ರಲ್ಲಿ ಒಟ್ಟು 528.27 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಭದ್ರಾವತಿ ನಗರದ ಭೋಮಿ ಕಾಲೋನಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮಾಜದ 49 ಜನರಿಗೆ ತಲಾ ಎರಡು ಎಕರೆಯಂತೆ ಒಟ್ಟು 98 ಎಕರೆ ಭೂಮಿಯನ್ನು ದರಕಾಸ್ತು ಮೂಲಕ ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಕೆಲವು ವರ್ಷಗಳ ಕಾಲ ದಲಿತರು ಭೂಮಿಯ ಸ್ವಾಧೀನಾನುಭವದಲ್ಲಿದ್ದು ಖಾತೆ ಪಹಣಿ ಮತ್ತು ಮಂಜೂರಾತಿ ಪತ್ರ ಎಲ್ಲವನ್ನು ಪಡೆದುಕೊಂಡಿದ್ದಾರೆ. ನಂತರ ವರ್ಷಗಳಲ್ಲಿ ಕಾಚಗೊಂಡನಹಳ್ಳಿಯ ಬಲಿಷ್ಟ ವರ್ಗಗಳು ಭೋವಿ ಸಮುದಾಯದವರ ಮೇಲೆ ದೌರ್ಜನ್ಯ ಮಾಡಿ ಭೂಮಿ ಸ್ವಾಧೀನದಿಂದ ಒಕ್ಕಲೆಬ್ಬಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮವಾಗಿ ಪರಿಶಿಷ್ಟರನ್ನು ಒಕ್ಕಲೆಬ್ಬಿಸಿ ಭೂಮಿಯ ಸ್ವಾಧೀನ ಹೊಂದಿರುವ ಬಲಾಡ್ಯ ಜಾತಿಗೆ ಸೇರಿದ ಜನರನ್ನು ಭೂಮಿಯಿಂದ ತೆರವುಗೊಳಿಸಿ, ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ಸು ಬಿಡಿಸಿಕೊಡಬೇಕು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಖಂಡರಾದ ಶಿವಬಸಪ್ಪ, ಚಂದ್ರಪ್ಪ, ಜೋಗಿ, ಬೊಮ್ಮನಕಟ್ಟೆ ಕೃಷ್ಣಪ್ಪ, ಹರಿಗೆ ರವಿ, ತಮ್ಮಯ್ಯ, ರಮೇಶ್ ಚಿಕ್ಕಮರಡಿ ಉಪಸ್ಥಿತರಿದ್ದರು.