ಪತ್ರಿಕಾಗೋಷ್ಟಿಯಲ್ಲಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಆರೋಪ
ಶಿವಮೊಗ್ಗ: 2.25 ಎಕರೆ ಅಡಿಕೆ ತೋಟಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಕಬಳಿಸಿ, ಮನೆಗೆ ಬಂದು ಜೀವ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ವಿಜಯಲಕ್ಷ್ಮಿ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಯಿಯವರು 2024ರ ಏಪ್ರಿಲ್ 7ರಂದು ಮೃತಪಟ್ಟಿರುತ್ತಾರೆ. ಆದರೆ ಈ ಗೋವಿಂದಪ್ಪ ಎಂಬುವವರು ನಮ್ಮ ತಾಯಿ 2006ರಲ್ಲಿಯೇ ಮರಣ ಹೊಂದಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ ನಮಗೆ ವಿಲ್ ಮಾಡಿಟ್ಟಿದ್ದಾರೆ ಎಂದು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಈಗ ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.
ನಮ್ಮ ತಾಯಿಯ ಹೆಸರಿನಲ್ಲಿ ಕೂಡ್ಲಿಗೆರೆ ಹೋಬಳಿಯ ಕೆಂಚಮ್ಮನಹಳ್ಳಿ ಗ್ರಾಮದ ಸ.ನಂ. 3 ರಲ್ಲಿ 2.25 ಎಕರೆ ಅಡಿಕೆ ತೋಟವಿದ್ದು, ಈ ತೋಟವನ್ನು ಗೋವಿಂದಪ್ಪ ಎನ್ನುವವರ ಹೆಸರಿಗೆ ಭೋಗ್ಯ ಹಾಕಿದ್ದರು. ಈಗ ಅವರು ಈ ಜಮೀನನ್ನು ಕಬಳಿಸಲು ಹೊರಟಿದ್ದಾರೆ. ಆದರೆ ಅವರು ಈ ಆಸ್ತಿಯನ್ನು ನನಗೆ ಹಾಗೂ ನನ್ನ ತಂಗಿಗೆ 2022 ರ ಜನವರಿ 31 ರಂದು ಜಂಟಿ ವಿಲ್ ಮಾಡಿಸಿ ರಿಜಿಸ್ಟ್ರರ್ ಮಾಡಿಸಿದ್ದಾರೆ ಎಂದರು.
ನಕಲಿ ದಾಖಲೆ ಸೃಷ್ಟಿಸಿದ ಮರಣಪತ್ರ ನೀಡಿದ ಭದ್ರಾವತಿ ನಗರಸಭೆ ಅಧಿಕಾರಿಗಳ ವಿರುದ್ಧ ಹಾಗೂ ನಕಲಿ ವಿಲ್ ಮಾಡಿಸಿದ ಅಧಿಕಾರಿಗಳ ವಿರುದ್ಧ ಮತ್ತು ಜಮೀನು ಕಬಳಿಸಲು ಹೊರಟಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹೋದರಿ ಅಲಮೇಲು ಇದ್ದರು.