ಬೆಂಗಳೂರು: ಭಾರತದ ಉನ್ನತ ಔಷಧ ನಿಯಂತ್ರಣ ಸಂಸ್ಥೆ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ನಡೆಸಿದ ಪರೀಕ್ಷೆಯಲ್ಲಿ ಪ್ಯಾರಸಿಟಮಲ್ ಸೇರಿ 50 ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ.
ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರ ಪ್ರದೇಶ ಮತ್ತು ಇಂದೋರ್ ಗಳಿಂದ ಸಂಗ್ರಹಿಸಿದ ಔಷಧಗಳ ಮಾದರಿಯಲ್ಲೂ ಗುಣಮಟ್ಟದ ಕೊರತೆ ಕಂಡು ಬಂದಿದೆ.
ಜ್ವರ, ಮೈಕೈ ನೋವಿಗೆ ಜನರು ಬಳಸುವ ಪ್ಯಾರಸಿಟಮಲ್ ಮಾತ್ರೆಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ.
ಆತಂಕದ ಅಸ್ವಸ್ಥತೆಗಳಿಗೆ ಬಳಸುವ ಕ್ಲೋನಾಜೆಪಮ್ ಮಾತ್ರೆಗಳು, ನೋವು ನಿವಾರಕ ಡಿಕ್ಲೋಫೆನಾಕ್, ಆಂಟಿ-ಹೈಪರ್ಟೆನ್ಷನ್ ಡ್ರಗ್ ಟೆಲ್ಮಿಸಾರ್ಟನ್, ಉಸಿರಾಟದ ಕಾಯಿಲೆಗಳಿಗೆ ಬಳಸುವ ಆಂಬ್ರೋಕ್ಸೋಲ್, ಆಂಟಿಫಂಗಲ್ ಫ್ಲುಕೋನಜೋಲ್ ಮತ್ತು ವಿವಿಧ ಮಲ್ಟಿವಿಟಮಿನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳು ಕಳಪೆ ಗುಣಮಟ್ಟದ ಔಷಧಿಗಳ ಪಟ್ಟಿಯಲ್ಲಿ ಸೇರಿವೆ.
ಹೆಣ್ಣು ಮಕ್ಕಳು ಬಳಸುವ ಮೆಹಂದಿಯ ಕುರಿತು ಕೂಡ ಸಿಡಿಎಸ್‌ಸಿಒ ಎಚ್ಚರಿಕೆ ನೀಡಿದೆ. ಈ ಮೆಹಂದಿಗಳ ಬಳಕೆ ಚರ್ಮ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಸಿಡಿಎಸ್‌ಸಿಒ ಹೇಳಿದೆ.