ಮೈಸೂರು: ಕನ್ನಡ ಚಿತ್ರರಂಗದ ನಟ ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸರಕಾರ ಆರೋಗ್ಯ ಇಲಾಖೆಯಲ್ಲಿ ಜಾರಿಗೆ ತಂದಿರುವ ‘ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’ ಈಗ ಹಲವೆಡೆ ಜನಪ್ರಿಯಗೊಂಡಿದೆ.
ಈ ಯೋಜನೆಯಿಂದ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣವನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ. ವ್ಯಕ್ತಿಯೊಬ್ಬರಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸವಾದರೆ 40 ಸಾವಿರ ರೂ. ಬೆಲೆಯ ಈ ಯೋಜನೆಯ ಚುಚ್ಚುಮದ್ದನು ವೈದ್ಯರು ನೀಡಲಿದ್ದಾರೆ. ಈ ಚುಚ್ಚುಮದ್ದು ಸುಮಾರು 2 ಗಂಟೆಗಳವರೆಗೆ ಹೃದಯಾಘಾತವನ್ನು ತಡೆಗಟ್ಟುತ್ತದೆ. ನಂತರ ಜಿಲ್ಲಾ ಹೃದಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಗಾಗಬಹುದು ಎಂದು ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಜ್ವಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಯೋಜನೆಯು ಸರಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಚುಚ್ಚುಮದ್ದು ಲಭ್ಯವಿರುವುದಿಲ್ಲ. ಹೆಚ್.ಡಿ.ಕೋಟೆಯ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 3 ಚುಚ್ಚುಮದ್ದುಗಳನ್ನು ನೀಡಲಾಗಿದೆ ಎಂದರು.
ಹೃದಯಾಘಾತದ ಮುನ್ಸೂಚನೆ ಕಂಡ ಬಂದ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಈ ಚುಚ್ಚುಮದ್ದು ಪಡೆದು ಸಾವಿನಿಂದ ಪಾರಾಗಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.