೨೪ ಗಂಟೆಯಲ್ಲಿ ನೀರಾವರಿ ಯೋಜನೆ ಜಾರಿ : ಬಿ.ಎಸ್.ಯಡಿಯೂರಪ್ಪ ಘೋಷಣೆ

ಶಿಕಾರಿಪುರ : ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ೨೪ ಗಂಟೆ ಅವಧಿಯಲ್ಲಿ ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕ್ಷೇತ್ರದ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದು ನಗರದ ಹುಚ್ಚೂರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಇದೇ ಸ್ಥಳದಿಂದ ಮೆರವಣಿಗೆಯಲ್ಲಿ ಚುನಾ ವಣಾ ಕಛೇರಿಗೆ ಆಗಮಿಸಿ, ನಾಮ ಪತ್ರ ಸಲ್ಲಿಸಿದ ನಂತರ ಮಾತನಾ ಡಿದರು.
ಸಾಮಾನ್ಯ ನಾಗರೀಕನಾಗಿದ್ದ ನನ್ನನ್ನು ಕ್ಷೇತ್ರ ಜನ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ ಮಾಡಿದ್ದಾರೆ. ಇವರ ಋಣವನ್ನು ತೀರಿಸಲು ಸಾಧ್ಯವಿಲ್ಲ ವಾಗಿದೆ ಎಂದು ಭಾವುಕರಾಗಿ ಹೇಳಿದರು.
ಪ್ರತೀ ಬೂತ್‌ಗಳಲ್ಲಿ ಶೇ. ೭೫ ರಿಂದ ೯೦ ರಷ್ಟು ಮತಗಳನ್ನು ಬಿಜೆಪಿಗೆ ಕೊಡಿಸುವಂತಹ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಎಲ್ಲೆಡೆ ಬೀಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರಕ್ಕೆ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದ ಅವರು, ಇದನ್ನು ಜಾರಿಗೆ ತರುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ. ತಾಲೂಕಿನಲ್ಲಿ ಬಹು ಪಾಲು ರೈತರು ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಈ ಮೆಕ್ಕೆಜೋಳಕ್ಕೆ ೧೫೦೦ ರೂ. ಬೆಂಬಲ ಬೆಲೆ ನಿಗದಿ ಗೊಳಿಸಿ ತಾಲೂಕಿನಲ್ಲಿಯೇ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀರಾಮುಲು, ಜಿ.ಎಂ. ಸಿದ್ದೇಶ್ವರ್, ಬಿ.ವೈ.ರಾಘವೇಂದ್ರ, ಕುಮಾರ್ ಬಂಗಾರಪ್ಪ, ಕೆ.ಪಿ.ನಂಜುಂಡಿ., ವೀರಯ್ಯ, ಅಬ್ದುಲ್ ಅಜೀಂ, ಯೋಗೀಶ್ವರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.