ಶಿವಮೊಗ್ಗ : ನಗರದ ಸ್ಲಂ ನಿವಾಸಿಗಳಿಗೆ ಕೇಂದ್ರ ಸರ್ಕಾರದಿಂದ ೧೫೯೦ ಮನೆಗಳು ಮಂಜೂರಾಗಿವೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ೧೦ ಸ್ಲಂ ನಿವಾಸಿಗಳಿಗೆ ಕೇಂದ್ರ ಸರ್ಕಾರದಿಂದ ೧೫೯೦ ಮನೆಗಳು ಮಂಜೂ ರಾಗಿವೆ. ಭದ್ರಾವತಿಯ ೭ ಸ್ಲಂ ನಿವಾಸಿಗಳಿಗೆ ೫೦೦ ಮನೆಗಳು ಮಂಜೂರಾಗಿವೆ ಎಂದರು.
ಫಲಾನುಭವಿ ಪರಿಶಿಷ್ಟ ಜಾತಿ / ವರ್ಗಕ್ಕೆ ಸೇರಿದ್ದರೆ ೫೦ ಸಾವಿರ ರೂ. ಹಣವನ್ನು, ಸಾಮಾನ್ಯ ವರ್ಗಕ್ಕೆ ಸೇರಿದವರು ೭೦ ಸಾವಿರ ರೂ. ಹಣ ನೀಡಬೇಕಾಗುತ್ತದೆ ಎಂದ ಅವರು, ಈಗಾಗಲೇ ನಮ್ಮ ಪಕ್ಷದ ಸ್ಲಂ ಮೋರ್ಚಾದ ವತಿಯಿಂದ ಈ ಬಗ್ಗೆ ಫಲಾನುಭವಿಗಳಿಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರ ಕೆರೆಗಳನ್ನು ಉಳಿಸಬೇಕಾಗಿದೆ. ಆದರೆ, ಅವುಗಳನ್ನೇ ಡಿ ನೋಟಿಫೈ ಮಾಡಿ ನುಂಗುವಂತಹ ಕಾರ್ಯಕ್ಕೆ ಮುಂದಾಗಿರುವುದು ರಾಜ್ಯದ ಜನರ ದುರಂತವಾಗಿದೆ ಎಂದ ಅವರು, ಈ ರೀತಿ ಹಿಂದಿನ ಯಾವುದೇ ಸರ್ಕಾರಗಳು ಮಾಡಿರಲಿಲ್ಲ ಎಂದು ಟೀಕಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ವಾಸವಾಗಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಬೇಕಾಗಿದೆ. ಇದರ ಬಗ್ಗೆಯೂ ಸಹ ಕಂದಾಯ ಸಚಿವರು ಉತ್ತರಿಸಬೇಕಾಗಿದೆ ಎಂದ ಅವರು, ವಿಧಾನಸಭಾಧ್ಯಕ್ಷರಾಗಿದ್ದಾಗ ತೋರುತ್ತಿದ್ದ ಕಾಳಜಿಯನ್ನು ಸಚಿವರಾದ ನಂತರ ಕಾಗೋಡು ತಿಮ್ಮಪ್ಪ ತೋರುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಕುಮಾರಸ್ವಾಮಿ, ಡಿ.ಎಸ್.ಅರುಣ್, ಚನ್ನಬಸಪ್ಪ, ಮಧುಸೂದನ್ ಮೊದಲಾದವರಿದ್ದರು.