ಸಂಕಷ್ಟಕ್ಕೀಡಾದವರಿಗೆ ತಕ್ಷಣ ಸ್ಪಂದಿಸಿ : ಬೇಳೂರು ಸೂಚನೆ
ಸಾಗರ: ದೂರದ ಬೆಲ್ಜಿಯಂ ದೇಶಕ್ಕೆ ಮಗಳ ಮನೆಗೆ ಹೋಗಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದರು.
ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ತಕ್ಷಣ ಸ್ಪಂದಿಸುವಂತೆ ಶಾಸಕರು ಸೂಚನೆ ನೀಡಿದರು.
ಮಳೆಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಮನೆ ಬಿದ್ದ ಪ್ರದೇಶಗಳಿಗೆ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಶಾಲಾ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಶಾಲೆಗಳು ಸೋರುತ್ತಿದ್ದರೆ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಶಾಸಕರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಓ, ಕಾರ್ಯದರ್ಶಿಗಳು ಸದಾ ಕಟ್ಟೆಚ್ಚರದಿಂದ ಇದ್ದು, ಯಾವುದೇ ಅನಾಹುತ ಆಗದಂತೆ ಅಗತ್ಯ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಸಹ ವರದಿ ತಯಾರಿಸಲು ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ವಿಪರೀತ ಮಳೆ ನಡುವೆಯೂ ಡೇಂಗ್ಯೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಅಧಿಕಾರಿಗಳು ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್, ಔಷಧಿ ಸಿಂಪಡಣೆಯಂತಹ ಕ್ರಮವನ್ನು ಕೈಗೊಳ್ಳಬೇಕು. ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂದರು.
ಮಜಾ ಮಾಡಲು ಬಂದಿಲ್ಲ: ಮಗಳ ಮದುವೆ ಮಾಡಿ ಕೊಟ್ಟು ಒಂದು ವರ್ಷವಾಗಿದ್ದು ಈತನಕ ಮಗಳ ಮನೆಗೆ ಬಂದಿರಲಿಲ್ಲ. ಕೌಟುಂಬಿಕ ಸಂಬಂಧವನ್ನು ಬಿಡಲು ಸಾಧ್ಯವೇ. ಕೆಲವರು ಅತಿವೃಷ್ಟಿ ಸಂದರ್ಭದಲ್ಲಿ ವಿದೇಶಕ್ಕೆ ಹೋಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಾನು ಇಲ್ಲಿ ಮೋಜುಮಸ್ತಿ ಮಾಡಲು ಬಂದಿಲ್ಲ. ಕಳೆದ ವರ್ಷ ಬರೋಣ ಎಂದರೆ ಬರಗಾಲ ಇದ್ದುದ್ದರಿಂದ ಕ್ಷೇತ್ರ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ನಾನು ಇಲ್ಲಿಗೆ ಬಂದ ಮೇಲೆ ಮಳೆ ಹೆಚ್ಚು ಬಂದಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನಮ್ಮ ಅಧಿಕಾರಿಗಳು, ಆಪ್ತ ಸಹಾಯಕರು, ವಿಶೇಷ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಇನ್ನಿತರರು ಹಾಜರಿದ್ದರು.