ಸರ್ಕಾರಗಳೇ ರೈತರ ಸಾಲ ಭರಿಸಲಿ : ಕೋಡಿಹಳ್ಳಿ ಚಂದ್ರಶೇಖರ್

ಶಿವಮೊಗ್ಗ : ದೇಶದ ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲವನ್ನು ಏಕೆ ಮನ್ನಾ ಮಾಡುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ಇಂದು ನಗರದ ಈದ್ಗಾ ಮೈದಾ ನದಲ್ಲಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರಿಂದ ಅರ್ಜಿ ಸಲ್ಲಿಸುವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ. ಮತ್ತು ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಕಟ್ಟುತ್ತದೆ. ಆದರೆ ಈ ದೇಶದ ಆಹಾರ ಭದ್ರತೆಯನ್ನು ಒದಗಿಸುವ ಅನ್ನದಾ ತನ ಸಾಲವನ್ನು ಮನ್ನಾ ಮಾಡಲು ಮೀನಾಮೇಷ ಎಣಿಸುತ್ತದೆ ಎಂದು ಟೀಕಿಸಿದರು.
ಉದ್ಯಮಿದಾರರಿಗೆ ೫ ಪೈಸೆ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತದೆ. ಆದರೆ ರೈತರಿಗೆ ಶೇ. ೧೦ ರಿಂದ ೧೨ ರವರೆಗೆ ಬಡ್ಡಿ ವಿಧಿಸಿ ಸಾಲ ನೀಡುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ರೈತ ಎಂದೂ ಕೂಡಾ ಸಾಲಗಾರನಲ್ಲ. ಸರ್ಕಾರವೇ ಬಾಕಿದಾರ ಎಂದರು.
ಪ್ರಸ್ತುತ ಮೆಕ್ಕೆಜೋಳಕ್ಕೆ ೬೦೦೦ ರೂ. ಉತ್ಪಾದನಾ ವೆಚ್ಚವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ೧೦೦೦ ರೂ. ಇದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಒಂದು ಸಾವಿರ ರೂ. ಕಳೆದು ಐದು ಸಾವಿರ ರೂ. ಹಣ ವನ್ನು ರೈತರಿಗೆ ಜಮಾ ಮಾಡಬೇಕು. ರಾಜ್ಯ ಸರ್ಕಾರ ೧೪೨೦ ಬೆಂಬಲ ಬೆಲೆ ಘೋಷಿಸಿದೆ. ಇದರಲ್ಲಿ ೧೦೦೦ ರೂ.ಗಳನ್ನು ಕಳೆದು ೪೨೦ ರೂ.ಗಳನ್ನು ರೈತರ ಸಾಲಕ್ಕೆ ಜಮಾ ಮಾಡಿ ಕೊಳ್ಳಬೇಕೆಂದು ಒತ್ತಾಯಿಸಿದರು.
ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿ ಮಾಡಲು ಬಂದರೆ ಯಾವುದೇ ಕಾರಣಕ್ಕೂ ಹಣ ನೀಡಬೇಡಿ ಎಂದ ಅವರು, ರೈತನಿಗೆ ನೀಡಿರುವ ಸಾಲ ದೇಶದ ಆಹಾರ ಭದ್ರತೆಗಾಗಿ ಎಂಬುದನ್ನು ಗಟ್ಟಿಯಾಗಿ ಹೇಳಿ ಎಂದು ಹೇಳಿದರು.
ಸಾಲದ ಹೊರೆ ದಿನೇ ದಿನೇ ರೈತರ ಎದೆಯ ಮೇಲೆ ಏರುತ್ತಿದೆ. ಇದರಿಂದಾಗಿ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಂತಾಗಿದೆ. ರೈತನ ಆರೋಗ್ಯ ಕೆಟ್ಟಾಗ ಉತ್ತಮ ಚಿಕಿತ್ಸೆ ಕೊಡಿಸಿಕೊಳ್ಳಲಾರದಂತಹ ಸ್ಥಿತಿಗೆ ರೈತ ಸಮೂಹ ತಲುಪಿದೆ. ಆದ್ದರಿಂದ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುವಾಗ ಯಾವ ಮಾನದಂಡಗಳನ್ನು ಅನುಸರಿಸುತ್ತಾರೋ ಅದೇ ಮಾನದಂಡಗಳನ್ನು ರೈತರ ಬೆಳೆಗೆ ಬೆಲೆ ನಿಗಧಿಪಡಿಸುವಾಗ ಅನುಸರಿಸ ಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್. ಬಸವ ರಾಜಪ್ಪ, ಡಾ. ಚಿಕ್ಕಸ್ವಾಮಿ, ಕಡಿ ದಾಳ್ ಶಾಮಣ್ಣ, ಹಾಲೇಶಪ್ಪ, ಶಿವ ಮೂರ್ತಿ ಮೊದಲಾದವರಿದ್ದರು.