ಶಿವಮೊಗ್ಗ: ಅಬ್ಬರಿಸಿದ ಮಳೆರಾಯ


ಶಿವಮೊಗ್ಗ :  ಶಿವಮೊಗ್ಗ ನಗರ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರದ ಮಳೆಗೆ  ಜನ ಜೀವನ ಅಸ್ತವ್ಯಸ್ತಗೊಂಡಿತು. ಸಂಜೆ ೫. ೩೦ ರ ನಂತರ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭೂಮಿಗೆ ಅಪ್ಪಳಿದ ಮಳೆರಾಯ ಧೋ ಎಂದು ಸುರಿದು, ನಗರದಲ್ಲಿನ ತಗ್ಗು ಪ್ರದೇಶಗಳು ಜಲಾವೃತ್ತವಾಗುವತೆ ಮಾಡಿತು.
ಶಿವಮೊಗ್ಗ ನಗರದಲ್ಲಿ ಕಳೆದ ಗುರುವಾರ ಸಂಜೆ ಯಿಂದ ಸುರುವಾಗಿದ್ದ ಮಳೆಯು ದಿನವು ಅಷ್ಟೋ ಇಷ್ಟೋ ಬರುತ್ತಿತ್ತಾದರೂ, ಸೋಮವಾರ ಸಂಜೆ ಸುರಿದ ಮಳೆ ಮಾತ್ರ  ನಗರವು ತೋಯ್ದು ತೊಪ್ಪೆಯಾಗುವಂತೆ ಮಾಡಿತು. ಸಂಜೆ ಹೊತ್ತಿಗೆ ಕೆಲಸ ಮುಗಿಸಿ ವಾಹನಗಳಲ್ಲಿ ಮನೆ ಕಡೆ ಮುಖ ಮಾಡಿದ್ದ ಜನರಿಗೆ  ಹೆಚ್ಚು ಒಂದು ಗಂಟೆಯಷ್ಟು ಕಾಲ ಮಳೆರಾಯ ಬ್ರೇಕ್‌ ಹಾಕಿ ನಿಲ್ಲಿಸಿಬಿಟ್ಟ. ನೋಡು ನೋಡುತ್ತಿದ್ದಂತೆಯೇ ರಸ್ತೆಗಳು ಜಲಾವೃತ್ತಗೊಂಡು ವಾಹನಗಳ ಸಂಚಾರಕ್ಕೆ ತೀವ್ರ ಅಡೆಚಣೆಯಾಯಿತು.

ಭಾನವಾರ ಮಧ್ಯಾಹ್ನ ನಗರದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿತ್ತು, ಮಳೆ ಅಬ್ಬರಕ್ಕೆ ನಗರದ ಅನೇಕ ಕಡೆಗಳಲ್ಲಿನ ಚರಂಡಿ ನೀರು ಸರಗವಾಗಿ ಹರಿದು ಹೋಗದೆ, ಅಲ್ಲಿಲ್ಲಿ ನಿಂತು ಮನೆಗಳಿಗೆ ನುಗ್ಗಿ ಅವಾಂತರ ಎಬ್ಬಿಸಿತ್ತು. ತಗ್ಗು ಪ್ರದೇಶಗಳು ನೀರು ತುಂಬಿಕೊಂಡು ಕೆರೆಗಳಂತಾಗಿದ್ದವು. ಈ ನಡುವೆಯೇ ಸೋಮವಾರ ಮತ್ತೆ ಸುರಿದ ಮಳೆಯು ನಗರವನ್ನು ಬೆಚ್ಚಿ ಬೀಳಿಸಿತು.

ಭಾನುವಾರ ಮಧ್ಯಾಹ್ನ ಬಂದ ಮಳೆಗೆ ಕಾಶಿಪುರದ ಕುವೆಂಪು ಬಡಾವಣೆಯಲ್ಲಿ ಚರಂಡಿಯಲ್ಲಿ ಮಳೆಯ ನೀರು ಸಾಗದೆ ಚಿಕ್ಕನಾಯ್ಕ ಎಂಬುವರ ಮನೆ ಜಲಾವೃತಗೊಂಡಿದೆ. ಪಾಲಿಕೆ ಸಿಟಿಯಲ್ಲಿನ ಚರಂಡಿಗಳನ್ನ ಸರಿಪಡಿಸಿದರೂ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ದುಸ್ಥಿತಿಯುಂಟಾಗಿತ್ತು. ದಿಗಂತ ಮುದ್ರಣಾಲಯದ ಕಾಂಪೌಂಡ್‌ ಗೋಡೆ ಕುಸಿದಿತ್ತು, ಈ ನಡುವೆಯೇ ಸೋಮವಾರ ಸುರಿದ ಮಳೆ ಇನ್ನಷ್ಟು ಅವಾಂತರಗಳನ್ನುಸೃಸ್ಟಿಸಿದೆ. ಸ್ಮಾರ್ಟ್‌ ಸಿಟಿ ಅವಾಂತರಗಳು ನಗರವು ಮತ್ತಷ್ಟು ನಲುಗಿ ಹೋಗುವಂತೆ ಮಾಡಿದೆ. ಅವೈಜ್ಷಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನಗರದ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಸೋಮವಾರ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಯಿತು. ಮಳೆಯಿಂದಾಗಿ ಶಿವಮೊಗ್ಗ ಹಲವು ಬಡಾವಣೆಗಳು ಜಲಾವೃತಗೊಂಡ ಪರಿಣಾಮ ಮನೆಗಳಿಗೆ
ನೀರು ನುಗ್ಗಿ ಸಂಕಷ್ಟ ಎದುರಿಸು ವಂತಾಯಿತು. ಮಳೆ ಬಂದಾಗ ತಮ್ಮ ಬಡವಾಣೆಗಳಲ್ಲಿ ನೀರು ಮನೆಗಳಿಗೆ ನುಗ್ಗುವುದಕ್ಕೆ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯೇ ಕಾರಣ ಎನ್ನುವ ಆರೋಪ ಸೋಮವಾರವೂ ಕೆಲವು ಬಡಾವಣೆಗಳ ಜನರಿಂದ ಕೇಳಿ ಬಂತು.

ಸ್ಮಾಟ್‌ ಸಿಟಿ ಅವಾಂತರಗಳ ಬಗ್ಗೆ ಸಾರ್ವಜನಿಕರು ವಿವಿಧ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳಿಗೂ ದೂರು ನೀಡಲಾಗಿದೆ. ಇಷ್ಟಾದರೂ ಅವ್ಯವಸ್ಥೆ ಮುಂದುವರಿದಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಅವೈಜ್ಷಾನಿಕ ಕಾಮಗಾರಿಗಳಿಂದಾಗುವ ತೊಂದರೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮಳೆಗಾಲ ಆರಂಭವಾದರೆ ಜನಜೀವನ ಮತ್ತಷ್ಟು ತೊಂದರೆಗೆ ಸಿಲುಕಲಿದೆ.