ವಸತಿ ರಹಿತರಿಗೆ ಆಶ್ರಯ ಮನೆ ಯೋಜನೆ ಅನುಷ್ಠಾನಗೊಳ್ಳುವುದೇ…?

ನಗರದಲ್ಲಿರುವ ವಸತಿರಹಿತರಿಗೆ ಸೂರನ್ನು ಒದಗಿಸಿಕೊಡುವ ಉದ್ದೇಶದಿಂದ ಆಶ್ರಯ ಯೋಜನೆ ಯಡಿ ಹೊಸದಾಗಿ ೬೦೦೦ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕೋರಲಾಗಿದ್ದು, ಈ ಯೋಜನೆ ಯಲ್ಲಿ ಆಶ್ರಯ ಮನೆಗಳು ಹಂಚಿಕೆಯಾಗುತ್ತವೆಯೇ? ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಕಳೆದ ೧೦ ವರ್ಷಗಳಿಂದ ಆಶ್ರಯ ಯೋಜನೆ ಯಡಿಯಲ್ಲಿ ಇದುವರೆಗೂ ೧೬ ಸಾವಿರ ಅರ್ಜಿಗಳು ಆಶ್ರಯ ಸಮಿತಿಗೆ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಇದೆ. ಅರ್ಜಿಯನ್ನು ಸಲ್ಲಿಸುವಾಗ ಫಲಾನುಭವಿ ಅರ್ಜಿ ಶುಲ್ಕವನ್ನು ಪಾವತಿಸಿದ್ದಾನೆ. ಅಲ್ಲದೆ ನಿಯಮದಂತೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದಾನೆ. ಆದರೂ ಸಹ ಇದುವರೆಗೂ ಆಶ್ರಯ ಯೋಜನೆಯಡಿಯಲ್ಲಿ ಒಂದೇ ಒಂದು ಮನೆ ಕೂಡಾ ಹಂಚಿಕೆಯಾಗಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಸಹ ವಸತಿ ರಹಿತರಿಗೆ ನಿವೇಶನ ಹಂಚಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ನಗರಪಾಲಿಕೆ ಆವರಣದಲ್ಲಿ ನೂಕು ನುಗ್ಗಲು ಉಂಟಾದ ಘಟನೆ ಕೂಡಾ ನಡೆದಿತ್ತು. ಕೆಲ ಮಧ್ಯವರ್ತಿಗಳು ಆಶ್ರಯ ಸಮಿತಿ ಅರ್ಜಿಗಳನ್ನು ಹೆಚ್ಚಿನ ದರಕ್ಕೆ ಮಾರಿಕೊಂಡಿದ್ದು ಕೂಡಾ ನಡೆದು ಹೋಯಿತು. ಆದರೂ ಸಹ ಇದುವರೆಗೂ ಯಾರೊಬ್ಬರಿಗೂ ಆಶ್ರಯ ನಿವೇಶನವಾಗಲೀ, ಮನೆಯಾಗಲೀ ನೀಡಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಇದೀಗ ವಿಧಾನಸಭಾ ಚುನಾವಣೆಗೆ ಕೇವಲ ಐದಾರು ತಿಂಗಳು ಮಾತ್ರ ಬಾಕಿ ಇರುವ ಈ ಸಂದರ್ಭ ದಲ್ಲಿ ವಸತಿ ರಹಿತರಿಗೆ ಸೂರನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಆಶ್ರಯ ಸಮಿತಿ ಮುಂದಾಗಿದೆ. ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚುನಾವಣೆಯ ಈ ಸಂದರ್ಭದಲ್ಲಿ ಇಂತಹ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಕೇವಲ ಮತಗಳಿಕೆಯ ತಂತ್ರವೇ ಹೊರತು ಯಾವುದೇ ಫಲಾನುಭವಿಗೆ ಮನೆಯನ್ನು ನೀಡುವಂತಹ ಕಾರ್ಯವಾಗುವುದಿಲ್ಲ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಒಬ್ಬ ಸಾಮಾನ್ಯ ಅರ್ಜಿದಾರ ೨೦೦ ರೂ., ಎಸ್‌ಸಿ, ಎಸ್ಟಿ ಅರ್ಜಿದಾರ ೧೦೦ ರೂ. ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಹಾಕಬೇಕಾಗಿದೆ. ಒಂದು ವೇಳೆ ಆಶ್ರಯ ಮನೆ ಮಂಜೂರಾಗಲಿಲ್ಲವೆಂದರೆ ಅಥವಾ ಯೋಜನೆಗೆ ಆಯ್ಕೆಯಾಗಲಿಲ್ಲವೆಂದರೆ ಈ ಹಣ ವಾಪಾಸ್ ಬರುವುದಿಲ್ಲ. ಒಟ್ಟಾರೆ ಈ ಯೋಜನೆಯ ಅನುಷ್ಠಾನವೇ ಸಾಕಷ್ಟು ಎಡೆ ಮಾಡಿಕೊಟ್ಟಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಕಳೆದ ಐದು ವರ್ಷಗಳ ಹಿಂದೆ ಅರ್ಜಿ ಹಾಕಿದವರ ಸ್ಥಿತಿ ಏನು? ಎಂಬುದರ ಬಗ್ಗೆ ಸಂಬಂಧಪಟ್ಟವರು ವಿವರ ನೀಡಬೇಕಾಗಿದೆ. ಅಲ್ಲದೆ ಈಗಾಗಲೇ ವಿರುಪಿನ ಕೊಪ್ಪದಲ್ಲಿ ನೂರಾರು ಮನೆಗಳು ನಿರ್ಮಾಣವಾಗಿದೆ. ಅವುಗಳಿಗೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಲಾಗಿಲ್ಲ. ಅಲ್ಲದೆ ಅವುಗಳನ್ನು ಹಂಚಿಕೆಯನ್ನೂ ಮಾಡಲಾಗಿಲ್ಲ ಎನ್ನಲಾಗುತ್ತಿದೆ.
ಈ ಎಲ್ಲಾ ಪ್ರಕ್ರಿಯೆಗಳು ಯಾವುದೂ ಪೂರ್ಣಗೊ ಳ್ಳದೇ ಇದೀಗ ಹೊಸದಾಗಿ ನಿವೇಶನರಹಿತರಿಗೆ ಆಶ್ರಯ ಮನೆಗಳನ್ನು ಕೊಡುವ ಬಗ್ಗೆ ಅರ್ಜಿಗಳನ್ನು ಆಹ್ವಾನಿಸಿ ರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗು ತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾಗುವುದ ರೊಳಗೆ ಅರ್ಜಿದಾರರಿಂದ ಅರ್ಜಿಗಳನ್ನು ಪಡೆದುಕೊಂಡು, ಅವುಗಳನ್ನು ಪರಿಶೀಲಿಸಿ, ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅವರುಗಳಿಗೆ ಮನೆಯನ್ನು ನಿರ್ಮಿಸಿಕೊಡಲು ಸಾಧ್ಯವೇ? ಎಂಬುದು ಸಹ ಕುತೂಹಲದ ಅಂಶವಾಗಿದೆ.
ಒಟ್ಟಾರೆ ಬಡವರ್ಗದ ಜನರನ್ನು ಮರಳು ಮಾಡುವ ಮತ್ತು ಅವರುಗಳನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಇಂತಹ ಯೋಜನೆಗೆ ಮುಂದಾಗಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದ್ದು, ಈ ಯೋಜನೆ ಯಶಸ್ವಿಯಾಗುವುದರ ಬಗ್ಗೆಯೇ ಸಾಕಷ್ಟು ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಕಳೆದ ಹತ್ತು ವರ್ಷಗಳಿಂದಲೂ ಇಂತಹ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಆಶ್ರಯ ನಿವೇಶನ ಹಂಚಿಕೆಯಾಗಿಲ್ಲ. ಬಡಜನತೆ ಅರ್ಜಿ ಸಲ್ಲಿಸುವಾಗ ಸಾವಿರಾರು ಹಣ ವ್ಯಯ ಮಾಡಿದ್ದಾರೆ. ಹಿಂದೆ ಅರ್ಜಿ ಹಾಕಿದವರಿಗೆ ಈ ಸಂದರ್ಭದಲ್ಲಿ ಆದ್ಯತೆ ನೀಡಿ, ಅರ್ಹರಿಗೆ ಮನೆ ನೀಡಬೇಕಾಗಿದೆ. ಆದರೆ ಬಡವರ ಭಾವನೆಗಳ ಜೊತೆ ರಾಜಕಾರಣ ಮಾಡುವ ತಂತ್ರ ಇದಾಗಬಾರದು.
-ಕೆ.ಪಿ.ಶ್ರೀಪಾಲ್, ವಕೀಲರು

ಕಳೆದ ನಾಲ್ಕೂವರೆ ವರ್ಷಗಳಿಂದ ಇಂತಹ ಕಾರ್ಯಕ್ಕೆ ಕೈ ಹಾಕದ ಸ್ಥಳೀಯ ಶಾಸಕರು ಇದೀಗ ಚುನಾವಣಾ ಸಂದರ್ಭದಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರುವುದರ ಹಿಂದಿರುವ ಅವರ ಚುನಾವಣಾ ಲಾಭದ ಗಿಮಿಕ್ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಬಡವರ ಬದುಕಿನ ಜೊತೆ ಯಾವುದೇ ಆಟವಾಡದೇ ನ್ಯಾಯಯುತವಾಗಿ ಯೋಜನೆಯನ್ನು ಅನುಷ್ಠಾನ ಮಾಡಬೇಕಾಗಿದೆ.
-ಧನಂಜಯ್, ಖಾಸಗಿ ಉದ್ಯೋಗಿ