ಲೇಖನ : ಸೌಮ್ಯ ಗಿರೀಶ್
ಆನಂದಪುರದಲ್ಲಿ ಅಪ್ಪ-ಅಮ್ಮನ ಮುದ್ದಿನ ಮಗಳಾಗಿ ಆನಂದದಿಂದ ಆಡಿ ಬೆಳೆದ ಹುಡುಗಿ ಕಿರುತೆರೆಯಲ್ಲಿ ‘ರಾಧಿಕಾ’ ಆಗಿ ‘ಮನೆ ಮಗಳು’ ಎನಿಸಿಕೊಳ್ಳುತ್ತಾ ‘ಬಿಗ್ ಬಾಸ್’ನಿಂದ ಕೃತ್ತಿಕಾ ಆಗಿ ಪರಿಚಯವಾಗುತ್ತಾ ಇಂದು ಹಿರಿತೆರೆಯಲ್ಲೂ ಮುದ್ದು ‘ಕೆಂಗುಲಾಬಿ’ಯಾಗಿ ಮಿಂಚಲು ಹೊರಟಿರುವ ಪ್ರತಿಭೆ ನಮ್ಮ ಮಲೆನಾಡ ಚೆಲುವೆ ಕೃತ್ತಿಕಾ ರವೀಂದ್ರ.
ಆ ಸುಂದರ ಬಾಲ್ಯ
ಅಪ್ಪ ರವೀಂದ್ರರವರು ಅಯುರ್ವೇದ ವೈದ್ಯರು, ಅಮ್ಮ ಸರ್ಕಾರಿ ಶಾಲೆಯ ಶಿಕ್ಷಕಿ ಹೀಗಾಗಿ ತುಂಬಾ ಶಿಸ್ತುಬದ್ಧಾಗಿ ಬೆಳೆದರು ಕೃತ್ತಿಕಾ. ೫ ರಿಂದ ೭ನೇ ತರಗತಿವರೆಗೂ ಅಮ್ಮನೇ ಟೀಚರ್, ಆದರೂ ಶಾಲೆಯಲ್ಲಿ ಅಮ್ಮ ಎಂದು ಕರೆಯುವ ಹಾಗಿರಲಿಲ್ಲ ಅಷ್ಟು ಶಿಸ್ತಿನಿಂದ ಬೆಳೆದರು. ನಂತರ ಇವರು ಸಾಗರದಲ್ಲಿ ತಮ್ಮ ದ್ವಿತೀಯ ಪಿಯು ಮುಗಿಸುವ ಹೊತ್ತಿಗೆ ಇವರನ್ನು ಕಲಾ ಸರಸ್ವತಿ ಕೈಬೀಸಿ ಕರೆಯಲು ಪ್ರಾರಂಭಿಸಿದ್ದು.
ಕೈ ಬೀಸಿ ಕರೆದ ಕಿರುತೆರೆ
ಮನೆಯಲ್ಲಿ ಯಾರೂ ಬಣ್ಣದ ಲೋಕದೊಡನೆ ನಂಟು ಹೊಂದಿದ್ದವರಲ್ಲ ಆದರೆ ಕೃತ್ತಿಕಾರಲ್ಲಿದ್ದ ಪ್ರತಿಭೆ ಅವರನ್ನು ಬಣ್ಣದ ಬದುಕಿನತ್ತ ಕರೆದೊಯ್ಯಿತು. ಇವರು ಬಾಲ ನಟಿಯಾಗಿ ಪರಿಚಯವಾದದ್ದು ‘ಝಿಂಬಾ’ ಧಾರವಾಹಿಯ ಮೂಲಕ. ನಂತರ ಮನೆಮಗಳು ಧಾರವಾಹಿ ಮೂಲಕ ತಮ್ಮದೊಂದು ಛಾಫು ಮೂಡಿಸಿದರು. ಮನೆಮಗಳಾಗಿ ಮಿಂಚಿದ್ದನ್ನು ಕಂಡು ಇವರನ್ನು ಅರಸಿ ಬಂದದ್ದು ‘ರಾಧಾ ಕಲ್ಯಾಣ’ ಧಾರವಾಹಿಯ ‘ರಾಕಾ’ ಪಾತ್ರ. ಈ ಧಾರವಾಹಿಯ ಯಶಸ್ಸು ಯಾವ ಮಟ್ಟದಲ್ಲಿತ್ತು ಎಂದರೆ ಕೃತ್ತಿಕಾರನ್ನು ರಾಕಾ ಎಂದೇ ಗುರುತಿಸುವ ಮಟ್ಟಕ್ಕೆ ಮನೆಮಾತಾದರು.
ರಾಕಾದಿಂದ ಕೃತ್ತಿಕಾ ಆಗಿ ಬೆಳೆದ ಆ ೬೩ ದಿನಗಳು :
ಕೃತ್ತಿಕಾರ ವೃತ್ತಿ ಬದುಕಿಗೆ ಮತ್ತು ವೈಯಕ್ತಿಕ ಬದುಕಿಗೆ ಹೊಸ ತಿರುವು ನೀಡಿದ್ದು ಮತ್ತು ಗುರುತು ಮೂಡಿಸಿದ್ದು ‘ಬಿಗ್‌ಬಾಸ್’ ಕಾರ್ಯಕ್ರಮ. ರಾಧಾ ಕಲ್ಯಾಣದ ರಾಕಾ ಆಗಿ ಮಾತ್ರ ಪರಿಚಯ ವಿದ್ದವರು ಕೃತ್ತಿಕಾ ಆಗಿ ಗುರುತಿಸಿಕೊಳ್ಳಲು ಇದೊಂದು ಸದಾವಕಾಶವಾಯಿತು. “ ಆ ೬೩ ದಿನಗಳು ಹೇಗೆ ಕಳೆಯಿತು ತಿಳಿಯಲಿಲ್ಲ. ಒಂದಷ್ಟು ದಿನ ಅದು ರವ-ರವ ನರಕ ಎನಿಸಿದ್ದು, ಇದೆ. ಕೆಲವೊಂದು ಬಾರಿ ಆ ಮನೆ ಎಷ್ಟು ಚೆಂದ ಇಲ್ಲಿಯೇ ಇದ್ದುಬಿಡೋಣ ಎನಿಸಿದೆ. ‘ಬಿಗ್‌ಬಾಷ್’ ನಿಜಕ್ಕೂ ಒಂದು ಮೈಂಡ್ ಗೇಮ್, ಮನಸ್ಸಿನ ಮೇಲೆ ಹತೋಟಿ ಇಲ್ಲದವರು ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ನನಗೆ ನನ್ನಲ್ಲಿ ನಂಬಿಕೆ ಹುಟ್ಟಿಸಿ ಜನಕ್ಕೆ ನಾನು ಹತ್ತಿರವಾಗುವಂತೆ ಮಾಡಿದ ಶೋ ‘ಬಿಗ್‌ಬಾಸ್’. ನಡೆದಿದ್ದ ಮೂರು ಸರಣಿಗಳಲ್ಲಿ ನಾನೇ ಅತ್ಯಂತ ಕಿರಿಯ ವಯಸ್ಸಿನ ರ್ಸ ಆದರೂ ಅಲ್ಲಿ ೬೩ ದಿನ ಕಳೆದೇ ಎನ್ನುವುದೇ ನನಗೆ ಹೆಮ್ಮೆ” ಎನ್ನುತ್ತಾರೆ ಕೃತ್ತಿಕಾ.
ಕೃತ್ತಿಕಾ ಸಿನಿಯಾನ :
‘ಪಟ್ರೆ ಲವ್ಸ್ ಪದ್ಮ’ ಕೃತ್ತಿಕಾ ಸಿನಿ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ತಾನೊಬ್ಬ ನಾಯಕಿಯಾಗಲು ಎಲ್ಲಾ ಅರ್ಹತೆ ಹೊಂದಿದ್ದೇನೆ ಎಂದು ಅವರು ನಿರೂಪಿಸಿದ ಚಿತ್ರ ‘ಪಟ್ರ ಲವ್ಸ್ ಪದ್ಮ’. ‘ಆಟ’ ಕೂಡಾ ಇವರ ಮತ್ತೊಂದು ಚಿತ್ರ. ಅಷ್ಟೂ ಹೊತ್ತಿಗೆ ಇನ್ನೂ ಆಯ್ಕೆ ಬಗೆಗಿನ ಸೂಕ್ಷ್ಮತೆ ತಿಳಿದಿರದ ಕೃತ್ತಿಕಾ ಆ ನಂತರದ ದಿನಗಳಲ್ಲಿ ಕಥೆಯನ್ನು ಆಧರಿಸಿ ಪಾತ್ರದ ಸೂಕ್ಷ್ಮತೆಯನ್ನು ಆಧರಿಸಿ ಪಾತ್ರ ಮಾಡಬೇಕು ಎಂದು ನಿರ್ಧರಿಸಿದರು.
ಅರಳಲಿದೆ ‘ಕೆಂಗುಲಾಬಿ’:
‘ಕೆಂಗುಲಾಬಿ’ ಚಿತ್ರ ಒಂದು ನಾಯಕಿ ಪ್ರದಾನ ಚಿತ್ರವಾಗಿದ್ದು ಕೃತ್ತಿಕಾ ಇದರಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಮುಗ್ಧ ಹೆಣ್ಣು ಮಗಳಾಗಿ, ಪರಿಸ್ಥಿತಿಯ ಒತ್ತಡದಿಂದ ವೇಶ್ಯೆಯಾಗಿ, ನಂತರ ವೇಶ್ಯಾವಾಟಿಕೆಯ ವಿರುದ್ಧ ಹೋರಾಡುವ ಹೆಣ್ಣಾಗಿ ಅಷ್ಟೇ ಅಲ್ಲದೆ ನೀವು ಊಹಿಸಿರದ ಮತ್ತಷ್ಟು ವಿಭಿನ್ನ ಷೇಡ್‌ಗಳಲ್ಲಿ ಸಾಗುತ್ತದೆ ‘ಕೆಂಗುಲಾಬಿ’ಯಲ್ಲಿನ ಕೃತ್ತಿಕಾರ ಪಾತ್ರ. ಹಾಗಾಗಿ ಇವರ ನಟನಾ ಪ್ರಾವಿಣ್ಯಕ್ಕೆ ಈ ಚಿತ್ರ ಹಿಡಿದ ಕೈಗನ್ನಡಿ ಎಂದರೆ ತಪ್ಪಿಲ್ಲ. ಇನ್ನೇನು ಒಂದು ತಿಂಗಳ ಸಮಯದಲ್ಲಿ ಆಡಿಯೋ ಬಿಡುಗಡೆಯಾಗಲಿದ್ದು, ಅತೀ ಶೀಘ್ರದಲ್ಲೇ ಈ ‘ಕೆಂಗುಲಾಬಿ’ ತನ್ನ ಕಂಪು ಸೂಸಲಿದೆ.
ಕೃತ್ತಿಕಾ ರವೀಂದ್ರ ಅಂದ್ರೆ……
ತುಂಬಾ ಅಂತರ್ಮುಖಿ ಹುಡುಗಿ. ಮಲೆನಾಡ ಹುಡುಗಿಯಾಗಿರುವುದರಿಂದ ಗಟ್ಟಿಗಿತ್ತಿ ಕೂಡಾ ಹೌದು. ಯಾವುದೇ ಪರಿಸ್ಥಿತಿ ಇದ್ದರೂ ಎದುರಿಸಬಲ್ಲೇ ಎಂಬ, ಧೈರ್ಯ, ಆತ್ಮಸ್ಥೈರ್ಯ ವಿರುವ ಹುಡುಗಿ. ಇಷ್ಟಿಲ್ಲದೆ ಆನಂದಪುರದ ಸಣ್ಣ ಹಳ್ಳಿಯಲ್ಲಿ ಬೆಳೆದ ಹುಡುಗಿ ಬೆಂಗಳೂರಿನ ಮಹಾನಗರಿಯಲ್ಲಿ ಜಯಿಸಲು ಸಾಧ್ಯವೇ?
“ ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಏನೂ ಮಾಡಬೇಕೆಂಬ ಗುರಿ, ಜೊತೆಗೆ ಎಂತಹ ಪರಿಸ್ಥಿತಿಯಾದರೂ ಎದುರಿಸಬಲ್ಲೆ ಎಂಬ ಧೈರ್ಯವಿದ್ದರೆ ಯಾವುದೂ ಅಸಾಧ್ಯ ಅಲ್ಲ.” ಅಂತಾರೆ ಕೃತ್ತಿಕಾ. ಮುಂದಿನ ದಿನಗಳಲ್ಲಿ ನಿರ್ದೇಶನದತ್ತ ಒಲವು ಹೊಂದಿರುವ ಕೃತ್ತಿಕಾರ ಕನಸುಗಳೆಲ್ಲಾ ನನಸಾಗಲಿ ಎಂದು ಹಾರೈಸುತ್ತೇವೆ.