ಮಾಡರ್ನ್ ಅನ್ನಪೂರ್ಣೆಯರು

ಲೇಖನ : ಸೌಮ್ಯ ಗಿರೀಶ್

ಮಾಡರ್ನ್ ಅನ್ನಪೂರ್ಣೆಯರು

ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಅವಳೊಂದು ಅಗಾಧ ಶಕ್ತಿಯ ಆಗರ. ತಾಯಿ, ಗೃಹಿಣಿ, ತಂಗಿ, ಮಗಳು, ಹೀಗೆ ಹತ್ತು ಹಲವು ಪಾತ್ರಗಳನ್ನು ಸಹಜವಾಗಿ ನಿಭಾಯಿಸುವ ಹೆಣ್ಣು ಮಗಳು ಇಂದು ಚುಕ್ಕಾಣಿ ಹಿಡಿದು ಜೀವನದ ಬಂಡಿಯನ್ನು ಸಾಗಿಸುವಲ್ಲಿ ಕೂಡ ಮುಖ್ಯ ಪಾತ್ರವಹಿಸುತ್ತಾಳೆ.
ಬಿಡುವಿಲ್ಲದೆ ಓಡುತ್ತಿರುವ ಈ ಫಾಸ್ಟ್ ಜಗತ್ತಿನಲ್ಲಿ ಬದುಕ ಬಂಡಿಯನ್ನು ದೂಡಲು ಗಂಡ- ಹೆಂಡತಿ ಇಬ್ಬರೂ ದುಡಿಯಲೇಬೇಕಾದ ಅನಿವಾ ರ್ಯತೆ ಬಂದೊದಗಿದೆ. ಒಂದೆಡೆ ಒತ್ತಡ ವೆನಿಸಿ ದರೂ ಇದೊಂದು ಸ್ವಾಗತಾರ್ಹ ಬೆಳವಣಿಗೆ ಏಕೆಂದರೆ ಇದರಿಂದ ಮಹಿಳಾ ಸಬಲೀಕರಣ, ಸ್ವಾವ ಲಂಬಿ ಜೀವನ ಎಲ್ಲವೂ ಗರಿಗೆದರುವಂತಾಗಿದೆ.

ಕೆಲಸ ಎಂದ ಕೂಡಲೇ ವಿದ್ಯಾವಂತ ಹೆಣ್ಣು ಮಕ್ಕಳಿಗೆ ಮಾತ್ರ ಎಂಬ ಕಲ್ಪನೆ ಕೆಲವರಲ್ಲಿದೆ. ಆದರೆ ಇಂದು ಕೃಷಿಯಿಂದ ಹಿಡಿದು ರಾಕೆಟ್ ಉಡಾ ವಣೆಯವರೆಗೆ ಎಲ್ಲೆಡೆ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ ಅಷ್ಟೆ ಅಲ್ಲದೆ ಸಾಧಿಸಿ ತೋರಿಸಿದ್ದಾರೆ. ಇಂತಹ ಸಾಧನೆಗಳಿಗೆ ಪೂರಕ ಪರಿಸರವಿರುವುದೂ ಅಷ್ಟೇ ಮುಖ್ಯ. ಅದು ಒದಗಿರುವುದರಿಂದಲೇ ಈ ಬೆಳವಣಿಗೆಗಳು ಸಾಧ್ಯವಾಗಿರುವುದು.
ಹೆಣ್ಣು ಮಗಳೆಂದರೆ ಅಡುಗೆ ಮನೆಗೆ ಸೀಮಿತ ಎಂಬ ಮಾತುಗಳಿತ್ತು. ಅದನ್ನು ಸುಳ್ಳು ಎಂದು ಕೆಲವರು ನಿರೂಪಿಸಿದರೆ ಮತ್ತೆ ಕೆಲವರು ಜನರು ಹೇಳಿದ ಅದೇ ಮಾತನ್ನೇ ತಮ್ಮ ತುತ್ತಿನ ಚೀಲ ತುಂಬಿಸುವ ಕಾಯಕವನ್ನಾಗಿ ಮಾಡಿಕೊಂಡಿ ದ್ದಾರೆ. ಹೌದು, ಅಡುಗೆ ಕೆಲಸದ ಉದ್ಯಮ ಇಂದು ಎಷ್ಟೋ ಮಹಿಳೆ ಯರಿಗೆ ಉದ್ಯೋಗ ಸೃಷ್ಟಿ ಮಾಡಿದೆ.

ಗಂಡ- ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಅನುಕೂಲಸ್ಥ ಕುಟುಂಬಗಳಲ್ಲಿ ಅಡುಗೆ ಮಾಡುವವರಿಲ್ಲ ಎಂಬ ಕೊರಗನ್ನು ನೀಗಿಸುತ್ತಿರುವವಳು ಮತ್ತೊಬ್ಬ ಹೆಣ್ಣು. ಒಬ್ಬ ವಿದ್ಯಾವಂತ ಮಹಿಳೆ ಸ್ವಾವಲಂಬಿಯಾಗಲು ಉದ್ಯೋಗಕ್ಕೆ ಹೊರಟರೆ, ತನ್ನ ಅಡುಗೆ ಕೆಲಸವನ್ನೇ ನಂಬಿರುವ ಮತ್ತೊಬ್ಬ ಸ್ವಾವಲಂಬಿ ಹೆಣ್ಣು ಇವಳಿಗೆ ಆಸರೆ ಯಾಗಿ ನಿಲ್ಲುವ ಕಲ್ಪನೆಯೇ ಎಷ್ಟು ಸುಂದರ.

ಇಂದು ಹಲವಾರು ಸ್ತ್ರೀ ಶಕ್ತಿ ಸಂಘಟನೆಗಳೂ ಕೂಡ ಆಹಾರ ಪದಾರ್ಥಗಳನ್ನು ತಯಾರಿಸುವ ಮಹಿಳೆಯರಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಕೊಡುವುದರೊಂದಿಗೆ ಉತ್ತಮ ವರಮಾನವನ್ನೂ ಒದಗಿಸುವ ಮೂಲಕ ಎಷ್ಟೋ ಅಕ್ಷರಜ್ಞಾನ ವಿ ಲ್ಲದ ಮಹಿಳೆಯರಿಗೆ ಉದ್ಯಮ ಸೃಷ್ಟಿಸಿದೆ.
ಹಪ್ಪಳ, ಉಪ್ಪಿನಕಾಯಿ, ಸಾಂಬಾರ್ ಪುಡಿ, ಹೀಗೆ ಹತ್ತು ಹಲವು ಸಾಮಗ್ರಿಗಳ ತಯಾರಿಕೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಇಂದು ಬಹುತೇಕ ಪರ ಊರಿನಿಂದ ಬಂದಿರುವ ಉದ್ಯೋಗಸ್ಥ ಪುರುಷರು, ಮಹಿಳೆಯರು ಮೆಸ್‌ಗಳು, ಪೇಯಿಂಗ್ ಗೆಸ್ಟ್ (ಪಿ.ಜಿ) ಹಾಸ್ಟೆಲ್‌ಗಳ ಮೊರೆ ಹೋಗುತ್ತಾರೆ. ಇಂತಹ ಮೆಸ್ ಮತ್ತು ಪಿಜಿಗಳನ್ನು ನಡೆಸುತ್ತಿರುವವರಲ್ಲಿ ಸಿಂಹಪಾಲು ಮಹಿಳಾಮಣಿ ಯರದ್ದೇ ಎನ್ನುವುದು ಹೆಮ್ಮೆಯ ವಿಷಯ.

ಅಡುಗೆಗೆ ಸೀಮಿತ ಎನಿಸಿಕೊಂಡವಳು ಅಡುಗೆ ಯನ್ನೇ ಉದ್ಯೋಗವಾಗಿಸಿಕೊಂಡು ಇತರರಿಗೆ ರುಚಿಕರ ಭೋಜನ ಉಣಿಸುವುದರ ಜೊತೆಗೆ ತನ್ನ ಮನೆಯ ತುತ್ತಿನ ಚೀಲ ತುಂಬುತ್ತಿದ್ದಾಳೆ ಎಂದರೆ ಇದೊಂದು ಹೊಸ ಉದ್ಯಮ ಎಂದರೆ ತಪ್ಪಿಲ್ಲ. ಹೀಗೆ ಅನ್ನ ನೀಡುತ್ತಿರುವ ಈ ಮಾಡ್ರನ್ ಅನ್ನಪೂರ್ಣೆಯರು ಸ್ವಾವಲಂಬಿ ಜೀವನಕ್ಕೊಂದು ನಿದರ್ಶನ.

ಇಂದು ಬರೆದಿದಿರುವ ಅಕ್ಷರಗಳನ್ನು ನಾನು ಕಲಿಯಲು ನೆರವಾದದ್ದು ಕೂಡ ಒಬ್ಬ ಮಾಡ್ರನ್ ಅನ್ನಪೂರ್ಣೆಯೇ, ಅವಳೇ ನನ್ನಮ್ಮ.