ಭದ್ರಾ ಜಲಾಶಯ ವೃತ್ತ ಕಾರ್ಮಿಕ ಸಂಘದಿಂದ ವೇತನ ಪಾವತಿಗೆ ಒತ್ತಾಯಿಸಿ ಧರಣಿ

ಶಿವಮೊಗ್ಗ : ವೇತನ ಪಾವತಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭದ್ರಾ ಜಲಾಶಯ ವೃತ್ತ ಕಾರ್ಮಿಕ ಸಂಘದವರು ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು.
ಜಲಸಂಪನ್ಮೂಲ ಇಲಾಖೆ ಭದ್ರಾವತಿಯಲ್ಲಿ ಸುಮಾರು ೨೦೪ಕ್ಕೂ ವಿವಿಧ ಹಂತದ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳಿಗೆ ನಿರ್ದಿಷ್ಟ ದಿನಾಂಕದಂದು ವೇತನ ಪಾವತಿಯಾಗುತ್ತಿಲ್ಲ. ಕೂಡಲೇ ಇವರುಗಳಿಗೆ ನಿರ್ದಿಷ್ಟ ದಿನಾಂಕದೊಳಗೆ ವೇತನ ಪಾವತಿಯಾಗುವಂತೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸೌಡಿ, ನೀರುಗಂಟಿ, ವಾಚ್‌ಮನ್, ಕಂಪ್ಯೂಟರ್ ಆಪರೇಟರ್‌ಗೆ, ಗೇಜ್ ರೀಡರ್, ಲಿಪಿಕ ಸಹಾಯಕ ಹೀಗೆ ವಿವಿಧ ಹಂತದ ಕಾರ್ಮಿಕರ ಸುಮಾರು ೨೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರುಗಳಿಗೆ ನಿರ್ದಿಷ್ಟ ದಿನಾಂಕದೊಳಗೆ ವೇತನ ಪಾವತಿಯಾಗದೇ ಇರುವುದ ರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದರು.
ವೇತನ ಪಾವತಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಇಎಸ್‌ಐ, ಪಿಎಫ್ ಕಂತನ್ನು ಕಳೆದ ಆರು ತಿಂಗಳಿನಿಂದ ಜಮಾ ಮಾಡದೇ ಇರುವುದರಿಂದ ಕಾರ್ಮಿಕರು ವೈದ್ಯಕೀಯ ಸೌಲಭ್ಯವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಧರಣಿಯಲ್ಲಿ ಸಂಘದ ಅಧ್ಯಕ್ಷ ಡಿ.ಸಿ.ಮಾಯಣ್ಣ, ಕಾರ್ಯದರ್ಶಿ ಎನ್.ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.