ಶಿವಮೊಗ್ಗ: ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿನ ಅನುಟೆಕ್ ಅಂಗಡಿಯಲ್ಲಿ ಕಾಪರ್ ವೈರ್ ಖರೀದಿ ಮಾಡಿ, ಹಣ ಕೊಡದೇ ವಂಚಿಸಿದ್ದ ವ್ಯಕ್ತಿಯನ್ನು ಭದ್ರಾವತಿ ಹಳೇ ನಗರ ಪೊಲೀಸರು ಬಂಧಿಸಿ, ಅತನಿಂದ 2 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅನುಟೆಕ್ ಅಂಗಡಿಯ ಮಾಲೀಕ ರಾಕೇಶ್ ಎಂಬುವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಭದ್ರಾವತಿ ನಗರ ವೃತ್ತ ನಿರೀಕ್ಷಕ ಶೈಲಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್ ಐ ಶರಣಪ್ಪ ಹಂಡ್ರಗಲ್ ತಂಡವು ಆರೋಪಿ ಪತ್ತೆಗೆ ಮುಂದಾಗಿತ್ತು.
ಜುಲೈ ೧೬ ರಂದು ದಾವಣಗೆರೆ ನಗರದ ಅಜಾದ್ ನಗರ ನಿವಾಸಿ ಸೈಫುಲ್ಲಾಖಾನ್( 35 ) ಪ್ರಕರಣದ ರೂವಾರಿಯಾಗಿದ್ದನ್ನು ಪತ್ತೆ ಹಚ್ಚಿ, ಆತನನ್ನು ವಶಕ್ಕೆ ಪಡೆಯುವ ಮೂಲಕ ಆತನಿಂದ ಭದ್ರಾವತಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಗಾಂಧಿನಗರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿ ಒಟ್ಟು 2 ವಂಚನೆ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 2,07800 ರೂಗಳ ವಿ-ಗಾರ್ಡ್ ಕಂಪನಿಯ ಕಾಪ್ಪರ್ ವೈರ್ ಬಾಕ್ಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 80,000 ರೂ ಬೆಲೆ ಬಾಳುವ ಸ್ಕೂಟಿ ಸೇರಿ ಒಟ್ಟು 2,87,800 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.