ಭತ್ತಕ್ಕೆ ಸೈನಿಕ ಹುಳು ಬಾಧೆ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ – ಜಿ.ಪಂ. ನಿರ್ಣಯ

ಶಿವಮೊಗ್ಗ : ಜಿಲ್ಲೆಯಲ್ಲಿ ಸೈನಿಕ ಹುಳುವಿನಿಂದ ಭತ್ತದ ಬೆಳೆ ನಾಶವಾಗಿದ್ದು, ರೈತರಿಗೆ ಸೂಕ್ತ ಪರಿಹಾರ ರಾಜ್ಯ ಸರ್ಕಾರ ನೀಡಬೇಕೆಂಬ ನಿರ್ಣಯವನ್ನು ಇಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸುರೇಶ್ ಸ್ವಾಮಿರಾವ್, ಜಿಲ್ಲೆಯಲ್ಲಿ ಸೈನಿಕ ಹುಳುವಿನ ಬಾಧೆ ಹೆಚ್ಚಾಗಿದೆ. ಇದರಿಂದಾಗಿ ರೈತರಿಗೆ ತೀವ್ರ ನಷ್ಟ ಉಂಟಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಹೆಚ್ಚಿನ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಈ ಸಭೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿ ದರು. ಸದಸ್ಯರ ಒತ್ತಾಯವನ್ನು ಬೆಂಬಲಿಸಿ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಪಕ್ಷಬೇಧ ಮರೆತು ಬೆಂಬಲಿಸಿದರು.
ಸೈನಿಕ ಹುಳುವಿನಿಂದಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸೈನಿಕ ಹುಳುವಿನ ಉಪಟಳ ಹೆಚ್ಚಾಗಿದೆ. ಸಾಕಷ್ಟು ಆರ್ಥಿಕ ನಷ್ಟವುಂಟಾಗಿದೆ. ಆದ್ದರಿಂದ ಸಭೆ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟೀ ನಿರ್ದೇಶಕ ಮಧುಸೂದನ್, ಸತತ ಎರಡು ವರ್ಷ ಬರಗಾಲ ಉಂಟಾದ ನಂತರ ಮೂರನೇ ವರ್ಷದಲ್ಲಿ ಉತ್ತಮ ಮಳೆಯಾದರೆ ಈ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತದೆ. ಇದು ಪ್ರತೀ ಗದ್ದೆಗಳಲ್ಲಿ ಮಣ್ಣಿನಲ್ಲಿಯೇ ಇರುತ್ತದೆ. ರಾತ್ರಿ ವೇಳೆ ಇದು ಭತ್ತದ ಸಸಿಯ ಕಾಂಡವನ್ನು ತಿನ್ನುತ್ತದೆ. ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ಔಷಧಿ ಸಿಂಪಡಣೆಯ ಬಗ್ಗೆ ಪತ್ರಿಕೆಗಳ ಮೂಲಕ, ಧ್ವನಿವರ್ಧಕದ ಮೂಲಕ ನೀಡಲಾಗಿದೆ ಎಂದು ಹೇಳಿದರು.
ಅಂತಿಮವಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲೆಯಲ್ಲಿ ಸೈನಿಕ ಹುಳುವಿನಿಂದಾಗಿರುವ ಭತ್ತದ ಬೆಳೆಯ ನಷ್ಟದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕೆಂಬ ನಿರ್ಣಯವನ್ನು ಸರ್ವಾನುಮತದಿಂದ ಸಭೆ ಅಂಗೀಕರಿಸಿತು.
ಸಭೆ ಆರಂಭವಾಗುತ್ತಿದ್ದಂತೆ ಸೊರಬ ತಾಲೂಕು ಆನವಟ್ಟಿ ಕ್ಷೇತ್ರದ ಜಿ.ಪಂ. ಸದಸ್ಯ ವೀರೇಶ್ ಕೊಟಗಿ ಸದಸ್ಯತ್ವ ರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಜಿ.ಪಂ. ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ. ಆದ್ದರಿಂದ ಸಭೆ ನಡೆಸುವ ಅಧಿಕಾರವಿಲ್ಲ ಎಂದು ಬಿಜೆಪಿ ಸದಸ್ಯ ಕೆ.ಈ.ಕಾಂತೇಶ್ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಓ ರಾಕೇಶ್‌ಕುಮಾರ್ ಈ ಗಾಗಲೇ ವೀರೇಶ್ ಕೊಟಗಿ ಸದಸ್ಯತ್ವ ರದ್ದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಳಹಂತದ ನ್ಯಾಯಾಲಯದ ಆದೇಶಗಳನ್ನು ವಜಾಗೊಳಿಸಿ ಅವರ ಸದಸ್ಯತ್ವವನ್ನು ಸಿಂಧುಗೊಳಿಸಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶದ ಪ್ರತಿಯನ್ನು ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳದಂತಹ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಸಿಇಓ ರವರು ಆದೇಶದ ಪ್ರತಿಗಳನ್ನು ನೀಡಿದ ನಂತರ ಸಭೆ ಆರಂಭಗೊಂಡಿತು.
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಸದಸ್ಯರಿಗೆ ನೀಡುತ್ತಿರುವ ಅನು ದಾನ ಸಾಕಾಗುತ್ತಿಲ್ಲ. ಜಿ.ಪಂ. ಸದಸ್ಯರಾಗಿ ಮೂರು ವರ್ಷ ಪೂರೈಸುತ್ತಾ ಬಂದರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಒಂದು ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡು ವಂತಹ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಬಹುತೇಕ ಸದಸ್ಯರು ಹೇಳಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ವಿಧಾನಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್, ಭಾನುಪ್ರಕಾಶ್ ಮೊದಲಾದವರಿದ್ದರು.