ಶಿವಮೊಗ್ಗ: ಮನುಷ್ಯನಾದವನು ಹೆಂಗೆಂಗೋ ಬದುಕುವುದಲ್ಲ, ಮಣ್ಣಿನ ಚೌಕಟ್ಟಿನಲ್ಲಿ ಬದುಕಬೇಕು.ದಾರಿ ತಪ್ಪದೆ, ಅಧ್ಯಯನ ಶೀಲರಾಗಿ, ತಂದೆತಾಯಿಗಳನ್ನು ಗೌರವಿಸಬೇಕು ಎಂದು ಚಲನಚಿತ್ರ ನಟ ದೊಡ್ಡಣ್ಣ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್.ಎಸ್.ಎಸ್. ಸೇವಾ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು. ಯಾರ ಮನಸ್ಸನ್ನು ನೋಯಿಸಬಾರದು, ತಂದೆ ತಾಯಿಗಳಿಗೆ, ಗುರುಹಿರಿಯರಿಗೆ ಗೌರವ ಕೊಡಬೇಕು. ತಾಯಿಯೇ ಮೊದಲ ಗುರು, ಕೋಟಿ ದೇವರನ್ನು ಪೂಜಿಸಿ ತಾಯಿಯನ್ನು ಕಡೆಗಣಿಸಿದರೆ ಏನು ಪ್ರಯೋಜನವಿಲ್ಲ. ಹಾಗೆಯೇ ತಂದೆ ಕೂಡ ನಂತರ ಸ್ಥಾನ ಗುರುವಿನದು, ಗುರುಕೂಡ ಅತ್ಯುತ್ತಮ ಸ್ಥಾನದಲ್ಲಿದ್ದಾನೆ. ಒಂದಕ್ಷರ ಕಲಿಸಿದವನು ಕೂಡ ಗುರು ಆತ ಜ್ಞಾನದಾತ ಎಂದರು.
ಕನ್ನಡ ಭಾಷೆಗೆ ಆದ್ಯತೆ ಕೊಡಿ ಜಗತ್ತಿನ ಮೂರು ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದು. ಕನ್ನಡ ಭಾಷೆಗೆ ವಿಶಿಷ್ಟವಾದ ಲಕ್ಷಣಗಳಿವೆ. ಮಾತನಾಡಿದಂತೆ ಬರೆಯಬಹುದು, ಬರೆದಂತೆ ಮಾತನಾಡಬಹುದು. ಲಿಪಿಗಳ ರಾಣಿ ಕನ್ನಡ. ಕನ್ನಡಕ್ಕೆ ಆದ್ಯತೆ ಕೊಡಿ, ಕೆಟ್ಟ ಪದಗಳಿಂದ ಕನ್ನಡಕ್ಕೆ ಕೆಟ್ಟ ಹೆಸರು ತರಬೇಡಿ, ಕನ್ನಡಕ್ಕಾಗಿ ದುಡಿದವರ ಸ್ಮರಿಸಿಕೊಳ್ಳಿ. ನಮ್ಮ ಹಳ್ಳಿಗರು ಕನ್ನಡವನ್ನು ಉಳಿಸಿದ್ದಾರೆ. ಕನ್ನಡ ಭಾಷೆಯನ್ನು ವಿಜೃಂಭಿಸಿ ಎಂದರು.