ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ನಂ.41, ಎಸ್.ಎ.ರವೀಂದ್ರನಾಥ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದು, ಮಂಗಳವಾರ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋದಾಗ ಎಸ್.ಎ.ರವೀದ್ರನಾಥ್ ನಗರದ ನಾಗರೀಕರು ಪ್ರತಿಭಟನೆ ನಡೆಸಿ ಘಟಕ ಸ್ಥಾಪಿಸದಂತೆ ಆಗ್ರಹಿಸಿ ಅಧಿಕಾರಿಗಳನ್ನು ವಪಾಸ್ಸು ಕಳುಹಿಸಿದ್ದಾರೆ.
ಎಸ್.ಎ.ರವೀಂದ್ರನಾಥ್ ನಗರದಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಸುಮಾರು 5-6 ಎಕರೆ ಜಾಗವನ್ನು ಖಾಲಿ ಬಿಡಲಾಗಿತ್ತು. ಅದರಲ್ಲಿ ಒಂದುವರೆ ಎಕರೆ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಪಾಲಿಕೆ ಅದಿಕಾರಿಗಳು ಹೇಳುತ್ತಿದ್ದು, ಉಳಿದ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಅದಿಕಾರಿಗಳು ಹೇಳುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿನ ನಾಗರೀಕರು ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಬಿಡುವುದಿಲ್ಲ. ʻತ್ಯಾಜ್ಯ ವಿಲೇವಾರಿ ಘಟಕ ಗೋಬ್ಯಾಕ್ʼ ಎಂದು ಒಕ್ಕೋರಲಿನ ಘೋಷಣೆ ಕೂಗಿ ಅಧಿಕಾರಿಗಳನ್ನು ವಪಾಸ್ಸು ಕಳುಹಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಆವರಗೊಳ್ಳದಲ್ಲಿ ಪಾಲಿಕೆ ಘನ ತ್ಯಾಜ್ಯವಿಲೇವಾರಿ ಘಟಕ ಇದ್ದು, ಇತ್ತೀಚಿಗೆ ಆ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ವಾರಗಟ್ಟಲೇ ಉರಿದು, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿತ್ತು. ಆ ಬೆಂಕಿಯಿಂದ ಅವರಗೊಳ್ಳ ಗ್ರಾಮ ಹಾಗೂ ಹೊಲಗದ್ದೆಗಳಲ್ಲಿ ದಟ್ಟ ಹೊಗೆ,ಗಬ್ಬುವಾಸನೆ ಪರಿಸರದಲ್ಲಿ ಆವರಿಸಿ ಜನರ ಉಸಿರಾಟಕ್ಕೆ ಸಮಸ್ಯೆ ಆಗಿತ್ತು. ಕೂಡಲೆ ಎಚ್ಚತ್ತುಕೊಂಡ ಗ್ರಾಮಸ್ಥರು ಘನವಿಲೇವಾರಿ ಘಟಕ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.
ಪ್ರತಿಭಟನೆಯಲ್ಲಿ ಎಂ. ಆನಂದ, ಸಿದ್ದಲಿಂಗಪ್ಪ, ಮಲ್ಲನಗೌಡ, ಬಸವರಾಜಪ್ಪ, ಮಂಜಮ್ಮ, ರಾಜೇಶ್ವರಿ, ಸುಶೀಲಮ್ಮ ಹಾಗೂ ನೂರಾರು ಜನರು ಇದ್ದರು.