ರಸ್ತೆ ಸುರಕ್ಷತೆ ನಮ್ಮೆಲ್ಲರ ಹೊಣೆ: ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ  ತಿರುಮೇಶ್‌ ಕರೆ

ಶಿವಮೊಗ್ಗ : ಸಂಚಾರ ನಿಯಮಗಳ ಅರಿವು ಕುರಿತು  ನಗರದ ಆದಿ ಚುಂಚನಗಿರಿ ಕಾಲೇಜಿನಲ್ಲಿ  ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ  ವತಿಯಿಂದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ   ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ ಐ ತಿರುಮೇಶ್‌ ಅವರು, ಸಂಚಾರಿ ನಿಯಮ ಕುರಿತು ಮಾಹಿತಿ ನೀಡಿದರು.

ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯು ನಮ್ಮೆಲ್ಲರ ಹೊಣೆಯಾಗಿದ್ದು, ಒಬ್ಬ ಜವಾಬ್ದಾರಿಯುತ ನಾಗರೀಕನ ಪ್ರಮುಖ ಕರ್ತವ್ಯವೂ ಆಗಿರುತ್ತದೆ. ಆಗ ಮಾತ್ರ ನಾವು ಅಪಘಾತ ಮುಕ್ತ ಸಮಾಜ ಕಾಣಲು ಸಾಧ್ಯವಿರುತ್ತದೆ ಎಂದು ಕರೆ ನೀಡಿದರು.
ವಾಹನ ಚಾಲನೆ ಮಾಡುವಾಗ ವೇಗದ ಮಿತಿಯ ಬಗ್ಗೆ ಎಚ್ಚರಿಕೆ ಇರಲಿ, ನೀವು ಮಾಡುವ ತಪ್ಪಿನಿಂದ, ನಿಮ್ಮ ಪ್ರಾಣದ ಜೊತೆಗೆ ಬೇರೆಯವರ ಪ್ರಾಣಕ್ಕೂ ಸಹಾ ತೊಂದರೆಯಾಗುವ ಸಂಭವವಿರುತ್ತದೆ ಎಂದು ಎಚ್ಚರಿಸಿದರಲ್ಲದೆ,  ವಾಹನ ಚಾಲಕರು ಮತ್ತು  ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಿ, ಇದರಿಂದ ಅಪಘಾತಗಳು ಸಂಭವಿಸಿದಾಗ ಚಾಲಕರು,  ಸವಾರರ  ತಲೆಗೆ ನೇರವಾಗಿ ಪೆಟ್ಟಾಗಿ ಅದರಿಂದ ಉಂಟಾಗುವ ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿರುತ್ತದೆ ಎಂದರು. 18  ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಬೇಡಿ, ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನ ಅಡಿ ವಾಹನದ ಮಾಲೀಕರನ್ನು ಅಪರಾಧಿಯಾನ್ನಾಗಿ ಮಾಡಿ, ಅವರಿಗೆ 03 ತಿಂಗಳ ಜೈಲುವಾಸ ಮತ್ತು ರೂ 25,000 ರೂ. ದಂಡ ವಿಧಿಸಬಹುದಾಗಿರುತ್ತದೆ. ಆದ್ದರಿಂದ ಯಾರೇ ಆಗಲಿ *ಚಾಲನಾ ಪರವಾನಿಗೆ ಪಡೆದ ನಂತರವೇ ವಾಹನ ಚಾಲನೆ ಮಾಡಿ ಎಂದು ಮನವಿ ಮಾಡಿದರು.

ಮಧ್ಯಪಾನ ಮಾಡಿ ಮತ್ತು ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದರಿಂದ ಚಾಲಕನ ಗಮನವು ಬೇರೆಡೆಗೆ ಹೋಗಿ ಮಾರಣಾಂತಿಕ ರಸ್ತೆ ಅಪಘಾತಗಳು ಜರುಗುತ್ತಿದ್ದು,ಇದರಿಂದ  ನೀವು  ಎದುರಿನಿಂದ ಬರುವ ವಾಹನದ ಸವಾರರು  ಅಥವಾ  ಪಾದಚಾರಿಗಳು ಪ್ರಾಣವನ್ನೇ ಕಳೆದುಕೊಳ್ಳುವ ಸಂಭವವಿರುತ್ತವೆ. ನಿಮ್ಮೊಂದಿಗೆ ನಿಮ್ಮ ಅವಲಂಬಿತರೂ ಕೂಡ ನೋವು ಅನುಭವಿಸುವಂತಾಗುತ್ತದೆ ಹಾಗೂ ಕುಡಿದು ವಾಹನ ಚಾಲನೆ ಮಾಡುವುದು ಮತ್ತು ಮೊಬೈಲ್ ಫೊನ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು  ಐಎಂವಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.

ರಸ್ತೆ ಸುರಕ್ಷತೆ ನಮ್ಮೆಲ್ಲರ ಹೊಣೆ, ಸಂಚಾರ ನಿಯಮಗಳನ್ನು ಚಾಚೂತಪ್ಪದೇ ಪಾಲನೆ ಮಾಡೋಣ ಎಂದರು. ಈ ಸಂದರ್ಭದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರಿಪೊಲೀಸ್ ಠಾಣೆಯ *ಅಧಿಕಾರಿ ಸಿಬ್ಬಂಧಿಗಳು ಮತ್ತು ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು,* ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.