ಜೂನ್ 9 ರಂದು ಪ್ರತಿಮಾ ಸಭಾದಿಂದ ದಿ.ಎಂ.ಜಿ. ಈಶ್ವರಪ್ಪರಿಗೆ ನುಡಿನಮನ

ಸಾಹಿತಿ ದಿಗ್ಗಜರು ಕಾರ್ಯಕ್ರಮದಲ್ಲಿ ಬಾಗಿ

ದಾವಣಗೆರೆ: ಇತ್ತೀಚಿಗೆ ನಿಧನರಾದ ಶಿಕ್ಷಣ ಪ್ರೇಮಿ, ಬಾಪುಜಿ ಸಂಸ್ಥೆಯ ನಿರ್ಧೇಶಕ,  ಜಾನಪದ ತಜ್ಞ ದಿ.ಎಂ.ಜಿ. ಈಶ್ವರಪ್ಪ ಅವರಿಗೆ ಪ್ರತಿಮಾ ಸಭಾದ ವತಿಯಿಂದ  ಜೂನ್ 9 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇವಲ ದಾವಣಗೆರೆ ಜಿಲ್ಲೆಯಲ್ಲದೆ ನಾಡಿನ ವಿವಿಧೆಡೆಯಿಂದ ಸಾಹಿತಿ ದಿಗ್ಗಜರು  ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದು ಪತ್ರಕರ್ತ ಬಿ.ಎನ್.ಮಲ್ಲೇಶ್ ಹೇಳಿದರು.

ಪ್ರತಿಮಾ ಸಭಾದ ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅನ್ವೇಷಕರು ಆರ್ಟ್ ಫೌಂಡೇಶನ್, ರಂಗಬಳಗ -ದಾವಣಗೆರೆ,  ಡಾ. ಎಂ.ಜಿ. ಈಶ್ವರಪ್ಪನವರ ಅಭಿಮಾನಿ ಬಳಗ ನುಡಿನಮನ ಕಾರ್ಯಕ್ರಮ ಸಹಕಾರದಲ್ಲಿ ನಡೆಯಲಿದೆ ಎಂದು ಅವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. 

ದಾವಣಗೆರೆಯಲ್ಲಿ ನೆಲಮೂಲ ಸಾಹಿತ್ಯ, ಸಾಂಸ್ಕೃತಿಕ ವಾತವಾರಣ ಇತ್ತು. ಅದನ್ನು  ಪ್ರತಿಮಾಸಭಾ ಎಂಬ ಸಾಹಿತ್ಯ, ಸಂಸ್ಕೃತಿ ಸಂಘಟನೆ ಮೂಲಕ ಸಮಗ್ರವಾಗಿ ಮತ್ತು ಸಮರ್ಥವಾಗಿ ಪ್ರತಿಬಿಂಭಿಸಿದ ಕೀರ್ತಿ ಎಂ.ಜಿ.ಈ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

 1980 ದಶಕದಲ್ಲಿ ಪ್ರತಿಮಾ ಸಭಾದಿಂದ ದಾರಾಬೇಂದ್ರೆ, ಕಾರಂತ, ಗಿರೀಶ್ ಕಾರ್ನಾಡ್ ಮುಂತಾದ ಸಾಹಿತಿ ದಿಗ್ಗಜರನ್ನು ಕರೆಸಿ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದೆವು. ಲಂಕೇಶ್ ರ ಸಂಕ್ರಾಂತಿ  ಇತ್ತೀಚಿಗೆ ಬಂದ  ‘ಶ್ರೀ ರಾಮಾಯಾಣ ದರ್ಶನಂ’  ಅಯಾ ಕಾಲ ಘಟ್ಟದಲ್ಲಿ ಬಂದ ಪ್ರಸಿದ್ಧ ನಾಟಕಗಳ ಪ್ರದರ್ಶನ ಆಯೋಜಿಸಲು ಪ್ರಯತ್ನಗಳು ನಡೆದಿವೆ. ಎಲ್ಲರನ್ನು ಜೊತೆ ಕರೆದುಕೊಂಡು ಪ್ರತಿಮಾ ಸಭಾವನ್ನು ಕಟ್ಟಿಬೆಳೆಸುವಲ್ಲಿ ಎಂಜಿಈ ಅವರ ಕೊಡುಗೆ ಬಹಳಷ್ಟಿದೆ ಎಂದು ವಿವರ ನೀಡಿದರು.

ಸಾಹಿತಿ, ಹಿರಿಯ ಪತ್ರಕರ್ತ ಬಾಮ ಬಸವರಾಜಯ್ಯ ಮಾತನಾಡಿ,  ನಮಗೆ ಮೆಸ್ಟ್ರಾದ ಎಂಜಿಈ ಲಂಕೇಶ್ ರ ಸಂಕ್ರಾಂತಿ ನಾಟಕದಲ್ಲಿ ಬಸವಣ್ಣನ ಪಾತ್ರದಲ್ಲಿ ನಟಿಸಿದ್ದರು. ಆ ನಾಟಕದಲ್ಲಿ ‘ಕೆಂಚ’  ಪಾತ್ರ ಬರುತ್ತದೆ. ದಾವಣಗೆರೆ ಭಾಷೆಯಲ್ಲಿ ಬೈಯುವ ಸಂಭಾಷಣೆ ಇತ್ತು. ಅದನ್ನು  ಜನರು ಬಹಳ ಮೆಚ್ಚಿಕೊಂಡಿದ್ದರು. ಆ ನಾಟಕ ನೋಡಲು ಬಂದ ಲಂಕೇಶರಿಗೆ ಇಷ್ಟವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ  ನಾಟಕ ಆಡಿಸಿದ್ದರು. ಎಂಜಿಈ ಅವರು ಒಳ್ಳೆಯ  ನಟರು ಆಗಿದ್ದರು ಎಂದು ನೆನಪಿಸಿದರು.

ನುಡಿ ನಮನಕ್ಕೆ ಮುಖ್ಯ ಅತಿಥಿಗಳಾಗಿ;  ಬೆಂಗಳೂರಿನ ಶ್ರೀನಿವಾಸ ಜಿ. ಕಪ್ಪಣ್ಣ,  ಖ್ಯಾತ ಕಾದಂಬರಿಕಾರ ಕುಂ, ವೀರಭದ್ರಪ್ಪ, ಪ್ರತಿಮಾ ಸಭಾದ ಪ್ರೊ. ಜಿ.ಎನ್. ಸತ್ಯಮೂರ್ತಿ,ಪ್ರೊ. ಪ್ರೊ. ಎಸ್. ಹಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಡಾ. ಕೃಷ್ಣಮೂರ್ತಿ ಹನೂರು, ಡಾ. ಬಿ. ರಾಜಶೇಖರಪ್ಪ, ಡಾ. ಜಯಪ್ರಕಾಶ್ ಮಾವಿನಕುಳಿ, ಡಾ. ಬಸವರಾಜ ನೆಲ್ಲಿಸರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಬನ್ನಿ.. ನುಡಿನಮನ ಸಲ್ಲಿಸೋಣ ಎಂದು ಕರೆ ನೀಡಿದರು.

ಎಂಜಿಈ ಯಾವಾಗಲು ಒಂದು ಮಾತು ಹೇಳುತ್ತಿದ್ದರು; ಅದೇನೆಂದರೆ, ಯಾವ ಊರಿನಲ್ಲಿ ಬಾರ್ ಗಳು, ಮೆಡಿಕಲ್ ಶಾಪ್ ಗಳು, ದೇವಾಸ್ಥಾನಗಳು ಇರುತ್ತವಿಯೋ,ಅವುಗಳಿಗೆ ತಕ್ಕಂತೆ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ ಎಂದು ಅರ್ಥ. ಅಂತಿಯೇ ಅದೇ ಜಾಗದಲ್ಲಿ ಜಾನಪದ, ಸಾಹಿತ್ಯ, ನಾಟಕ, ರಂಗಭೂಮಿ ಸೇರಿದಂತೆ ಇತರೆ ಕಲಾ ಪ್ರಕಾರಗಳು ಅಭಿವೃದ್ಧಿಗೊಂಡಿದ್ದರೆ, ಆ ಊರಿನ ಸಾಮಾಜಿಕ ಸ್ವಾಸ್ಥ್ಯ ಸುಸ್ಥಿತಿಯಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದೇಳುತ್ತಿದ್ದರು’  ಎಂದು ಅವರು ನೆನಪು ಮಾಡಿಕೊಂಡರು.

ಸುದ್ಧಿಗೋಷ್ಠಿಯಲ್ಲಿ ರಂಗ ಕರ್ಮಿಗಳಾದ ಎಸ್.ಎಸ್. ಸಿದ್ದರಾಜು, ಎನ್.ಟಿ. ಮಂಜುನಾಥ್, ಶಂಭಣ್ಣ ಇದ್ದರು.