ಮಾಧ್ಯಮದ ಮುಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ
ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿಗೆ ಸಚಿವರನ್ನು ಹೊಣೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 28 ಜನ ಅಭ್ಯರ್ಥಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಯಾವ ರೀತಿ ಕೆಲಸ ಮಾಡಬೇಕು ಎಂದೂ ಕಿವಿಮಾತು ಹೇಳಿದ್ದಾರೆ.
ಗೆದ್ದವರು ರಾಜ್ಯದ ಪರ ಧ್ವನಿ ಎತ್ತಬೇಕು. ತೆರಿಗೆ ಅನ್ಯಾಯದ ಬಗ್ಗೆ, ನೀರಾವರಿ ಯೋಜನೆಗಳ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಬೇಕು. ರಾಜ್ಯಕ್ಕಾಗಿರುವ ಮಲತಾಯಿ ಧೋರಣೆ ಕುರಿತು ಒಗ್ಗಟ್ಟಾಗಿ ಮಾತನಾಡಿ. ನಾವು 100 ಜನ ಸಂಸತ್ನಲ್ಲಿದ್ದೇವೆ. ನಮಗೆ ಹೆಚ್ಚಿನ ಸಮಯಾವಕಾಶ ಸಿಗುತ್ತೆ. ಎಲ್ಲರೂ ಅಧಿವೇಶನದಲ್ಲಿ ಮಾತನಾಡಿ. ಕ್ಷೇತ್ರದ ಪರವಾಗಿ ಮಾತನಾಡಿ ಎಂದು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಕ್ಷೇತ್ರವಾರು ಸೋಲಿಗೆ ಕಾರಣ ಏನು ಎಂಬ ಬಗ್ಗೆ ಚರ್ಚೆ ಮಾಡಿದರು. ಹೊಣೆಗಾರಿಕೆ ಬಹಳ ಮುಖ್ಯ ಎಂದಿದ್ದಾರೆ. ಆಗಿರುವ ನ್ಯೂನತೆ ಸರಿಪಡಿಸಿ ಪಕ್ಷ ಸಂಘಟನೆ ಮಾಡಲು ಸೂಚನೆ ಕೊಟ್ಟಿದ್ದಾರೆ. ಒಂದು ಕಾರ್ಯಯೋಜನೆ ಮಾಡಿ, ಎಲ್ಲಿ ಸೋಲಾಗಿದ, ಆ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ. ಮುಂದೆ ಎಲ್ಲರ ಜೊತೆ ಸಭೆ ನಡೆಸಿ ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ಸಚಿವರಿಗೂ ಮಾಹಿತಿ ಕೇಳಿದ್ದಾರೆ. ವಿಧಾನಸಭೆ ಕ್ಷೇತ್ರವಾರು ವರದಿ ಕೇಳಿದ್ದಾರೆ. ಎಐಸಿಸಿ ಅಧ್ಯಕ್ಷರು, ಸಿಎಂ, ಡಿಸಿಎಂ ಬಳಿಯೂ ವರದಿ ಕೇಳಿದ್ದಾರೆ. ಚುನಾವಣೆ ನಡೆದ ರೀತಿ, ಗೆದ್ದಿರುವ ಬಗ್ಗೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಿದೆ ಎಂದರು.
ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಯಿತು: ನಾವು ಸೋಲಿನ ದುಃಖದಿಂದ ಹೊರಬಂದಿಲ್ಲ. ಮತ ನೀಡಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಹೇಳಬೇಕು. ಯಾರು ಮತ ಕೊಟ್ಟಿಲ್ಲ ಅವರ ಹೃದಯವನ್ನೂ ಗೆಲ್ಲುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ನನ್ನ ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಯಿತು. ಜೊತೆಗೆ ರಾಜ್ಯಾದ್ಯಂತ ಓಡಾಡಬೇಕಾಗಿತ್ತು. ಈ ಸೋಲು ವೈಯಕ್ತಿಕ ಸೋಲು. ಬಿಜೆಪಿಯವರು ಉತ್ತಮ ಸ್ಟ್ರಾಟೆಜಿ ಮಾಡಿದ್ದಾರೆ. ವಿವಾದರಹಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು ಎಂದು ಹೇಳಿದರು.