ಕುವೆಂಪು ವಿವಿ ಗ್ರಂಥಾಲಯ ವಿಜ್ಞಾನ ವಿಭಾಗದಿಂದ ರಾಷ್ಟ್ರೀಯ ಸಮಾವೇಶ

ಡಿಜಿಟಲ್ ಗ್ರಂಥಾಲಯಗಳೇ ಆಧುನಿಕ ಕಲಿಕಾ ಕೇಂದ್ರಗಳು: ಪ್ರೊ. ಕೆಂಪರಾಜು

ಶಂಕರಘಟ್ಟ, : ಭೌತಿಕ ಕಟ್ಟಡ ಮತ್ತು ಪುಸ್ತಕಗಳುಳ್ಳ ಗ್ರಂಥಾಲಯಗಳು ಇಂದು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾಗಿವೆ. ವೈವಿಧ್ಯಮಯವಾದ ಕಲಿಕಾ ಅವಕಾಶಗಳನ್ನು ನೀಡುತ್ತಿದ್ದು ಕಲಿಕಾ ಕೇಂದ್ರಗಳಾಗಿವೆ ಎಂದು ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ಟಿ ಡಿ ಕೆಂಪರಾಜು ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶುಕ್ರವಾರ ವಿವಿಯ ಬಸವ ಸಭಾಭವನದಲ್ಲಿ ವಯೋನಿವೃತ್ತಿ ಹೊಂದುತ್ತಿರುವ ವಿಭಾಗದ ಪ್ರಾಧ್ಯಾಪಕ ಡಾ ಬಿ ಎಸ್ ಬಿರಾದಾರ್ ಅವರ ಗೌರವಾರ್ಥ ಆಯೋಜಿಸಿದ್ದ “ಡಿಜಿಟಲ್ ಕ್ರಾಂತಿ: ಸ್ಮಾರ್ಟ್ ಲೈಬ್ರರಿಗಳ ನಿರ್ಮಾಣದ ಹಾದಿ” ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶವದಲ್ಲಿ ಮುಖ್ಯ ಭಾಷಣ ಮಾಡಿ ಅವರು ಮಾತನಾಡಿದರು. ಡಿಜಿಟಲ್ ತಂತ್ರಜ್ಞಾನವು ಸರ್ವತ್ರವಾಗಿದ್ದು ಗ್ರಂಥಪಾಲಕರು ಮತ್ತು ಗ್ರಂಥಾಲಯಗಳು ಇವುಗಳನ್ನು ಅಳವಡಿಸಿಕೊಳ್ಳುವುದು, ಮುಂದುವರಿಯುವುದು ಅತ್ಯವಶ್ಯ ಎಂದು ತಿಳಿಸಿದರು.

ಎಲ್ಲ ಕ್ಷೇತ್ರಗಳು ಸ್ಮಾರ್ಟ್ ಆಗುತ್ತಿವೆ ಮತ್ತು ಭಾರತದೆಲ್ಲೆಡೆ ಇಂದು ಸ್ಮಾರ್ಟ್ ಪದವು ಮೊಳಗುತ್ತಿದೆ. ಹೀಗಾಗಿ ತಂತ್ರಜ್ಞಾನ ಅಳವಡಿಸಿಕೊಂಡ ಸ್ಮಾರ್ಟ್ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದಿವೆ. ಡಿಜಿಟಲ್ ತಂತ್ರಜ್ಞಾನ, ಕ್ಲೌಡ್ ಕಂಪ್ಯೂಟಿಂಗ್ ಗಳಿಂದಾಗಿ ಮಾಹಿತಿಯ ಬಳಕೆ, ಹಂಚಿಕೊಳ್ಳುವಿಕೆ, ಉಪಯುಕ್ತತೆಯ ವಿಧಾನಗಳು ಬದಲಾಗಿರುವುದು ಕಾಣಬಹುದು. ಗುಣಮಟ್ಟ ಮತ್ತು ವೃತ್ತಿಪರತೆಯನ್ನು ಇದು ಹೆಚ್ಚಿಸುತ್ತಿದೆ.

ಗ್ರಂಥಾಲಯ ಸೌಲಭ್ಯಗಳ ಬಳಕೆಯು ಇಂದು ಭೌಗೋಳಿಕ ಮಿತಿ ದಾಟಿದೆ, ಹೆಚ್ಚು ಅಗ್ಗವಾಗಿದೆ, ಸರ್ವರನ್ನು ತಲುಪುವ ಸಾಧ್ಯತೆಗಳನ್ನು ಹೊಂದಿರುವುದು ಡಿಜಿಟಲ್ ತಂತ್ರಜ್ಞಾನ ನೀಡಿ ವಿಶೇಷತೆ, ಇದನ್ನು ಅಳವಡಿಸಿಕೊಳ್ಳಿ ಎಂದು ಸಲಹೆಯಿತ್ತರು.

ಹಾಸನ ವಿವಿಯ ಕುಲಪತಿ ಪ್ರೊ. ತಾರಾನಾಥ್ ಮಾತನಾಡಿ, ಗ್ರಂಥಾಲಯಗಳು ಇಂದು ಡಿಜಿಟಲ್ ಬಳಕೆಗೆ ತೆರೆದುಕೊಂಡಿದ್ದು ಪುಸ್ತಕದಾಚೆಗೆ ಬೇರೆ ಜಗತ್ತನ್ನು ಹೊಂದಿವೆ. ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರಿಗೆ ಹೊಸ ಕಲಿಕೆಯ ಸುಲಭ ಹಾದಿಗಳನ್ನು ತೆರೆದಿಟ್ಟಿವೆ. ವಿಶೇಷವಾದ ಕಲಿಕೆಯ ಸ್ಥಾನಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಭಾಗದ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ ಎಸ್ ಬಿರಾದಾರ್ ಅವರೂ ವಯೋನಿವೃತ್ತಿಯ ಹೊಂದುತ್ತಿದ್ದು ಅವರಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್ ಪದ್ಮಮ್ಮ, ಪ್ರೊ. ಧರಣಿಕುಮಾರ್ ಪಿ ಹಾಗೂ ವಿವಿಧ ಕಾಲೇಜುಗಳ ಅಧ್ಯಾಪಕರು, ಗ್ರಂಥಪಾಲಕರು ಹಾಜರಿದ್ದರು.

………………………………………………………
ಕುಲಪತಿಗಳ ಸಂಗಮ*

ಗ್ರಂಥಾಲಯ ವಿಜ್ಞಾನ ವಿಭಾಗದ ಈ ರಾಷ್ಟ್ರೀಯ ಸಮಾವೇಶ ಕಾರ್ಯಕ್ರಮವು ಕರ್ನಾಟಕದ ಎಂಟು ವಿಶ್ವವಿದ್ಯಾಲಯಗಳ ಕುಲಪತಿಗಳು ಒಂದೇ ವೇದಿಕಯಲ್ಲಿ ಸೇರುವ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.ಸಮಾವೇಶದಲ್ಲಿ ಬೀದರ್ ವಿವಿಯ ಪ್ರೊ. ಬಿ ಎಸ್ ಬಿರಾದಾರ್, ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ಟಿ ಡಿ ಕೆಂಪರಾಜು, ದಾವಣಗೆರೆ ವಿವಿಯ ಪ್ರೊ. ಬಿ ಡಿ ಕುಂಬಾರ್, ಹಾಸನ ವಿವಿಯ ಪ್ರೊ. ತಾರಾನಾಥ್ ಟಿ ಸಿ, ಹಾವೇರಿ ವಿವಿಯ ಪ್ರೊ. ಸುರೇಶ್ ಹೆಚ್ ಜಂಗಮಶೆಟ್ಟಿ, ಕೊಪ್ಪಳ ವಿವಿಯ ಪ್ರೊ. ಬಿ ಕೆ ರವಿ, ಬಾಗಲಕೋಟೆ ವಿವಿಯ ಪ್ರೊ. ಆನಂದ ದೇಶಪಾಂಡೆ, ಚಾಮರಾಜನಗರ ವಿವಿಯ ಪ್ರೊ. ಎಂ ಆರ್ ಗಂಗಾಧರ್, ಕೊಡಗು ವಿವಿಯ ಪ್ರೊ. ಅಶೋಕ್ ಸಂಗಪ್ಪ ಆಲೂರ್ ಅವರು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಯಿತು.