ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ: ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿಕೆ

ದಾವಣಗೆರೆ: ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿದ್ದರು. ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂದು ದಾವಣಗೆರೆ ನೂತನ ಸಂಸದರಾಗಿ ಆಯ್ಕೆಯಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಗೆಲುವಿನ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು,  ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು  ಮಾಡಿ ತೋರಿಸುತ್ತೇನೆ. ಕಳೆದ 25 ವರ್ಷದಿಂದ ದಾವಣಗೆರೆ ಕ್ಷೇತ್ರದಲ್ಲಿ ಆಗದ ಕೆಲಸ ಮಾಡುವ ಸಲುವಾಗಿ ನನಗೆ ಮತ ನೀಡಿದ್ದಾರೆ. ಜನತೆಯ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಈ ಬಾರಿ ಜನ ಬದಲಾವಣೆ ಬಯಸಿದ್ದರು. ಅದರಂತೆ ತೀರ್ಪು ಪ್ರಕಟವಾಗಿದೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು, ಸ್ಥಳೀಯ ಶಾಸಕರು, ಕಾರ್ಯಕರ್ತರು, ಮುಖಂಡರು ನನ್ನ ಗೆಲುವಿಗೆ ಕಾರಣವಾಗಿದೆ. ಮುಂದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕೈಗಾರಿಕೆ, ಶಾಶ್ವತ ನೀರಾವರಿ ಯೋಜನೆಗಳು, ನಿರುದ್ಯೋಗ ಸಮಸ್ಯೆ ನಿವಾರಣೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.