ಶಿವಮೊಗ್ಗ: ಜಲಮಂಡಳಿ ಹಾಗೂ ಪಾಲಿಕೆ ಆಡಳಿತ ವ್ಯವಸ್ಥೆಯು ಮುಂದಿನ ಹತ್ತು ದಿನಗಳ ಒಳಗಾಗಿ ನಗರದ ನಾಗರೀಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಗಡುವು ನೀಡಿರುವ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟವು, ಶುದ್ಧ ನೀರಿನ ವ್ಯವಸ್ಥೆಯ ನಿರ್ವಹಣೆ ತಮ್ಮಿಂದಾಗಿದ್ದರೆ, ನಮಗೆ ಕೊಡಿ, ನಾವು ಮಾಡಿ ತೋರಿಸುತ್ತೇವೆಂದು ಸವಾಲು ಹಾಕಿದೆ.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿನ ಕುಡಿಯುವ ನೀರಿನ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಹಲವು ದಿನಗಳಿಂದ ನಗರದಲ್ಲಿ ಮಣ್ಣು ಮಿಶ್ರಿತ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಅದು ಈತನಕವೂ ಸರಿ ಹೋಗಿಲ್ಲ. ಇದಕ್ಕೆ ಶಾಸಕರು, ಅಧಿಕಾರಿಗಳು ಏನೇನೋ ಕಾರಣ ನೀಡಿದ್ದಾರೆ. ಆದರೆ ನಾವು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ, ಅಲ್ಲಿ ಕಂಡುಕೊಂಡ ಸತ್ಯವೇನೆಂದರೆ, ಶುದ್ಧೀಕರಣದ ಘಟಕದಲ್ಲೇ ಸಾಕಷ್ಟು ಲೋಪಗಳಿರುವುದು ಕಂಡು ಬಂದಿದೆ ಎಂದು ಪುನರುಚ್ಚರಿಸಿದರು.
ನ್ಯೂ ಮಂಡ್ಲಿಯಲ್ಲಿ ಇರುವ ಕೆ.ಆರ್.ವಾಟರ್ ವರ್ಕ್ಸ್‌ನ ನೀರು ಶುದ್ದೀಕರಣ ಘಟಕದಲ್ಲಿ ಸರಿಯಾದ ಯಂತ್ರಗಳೇ ಇಲ್ಲ, ಅವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ. ಈ ಹಿಂದೆ ಉಪಯೋಗಿಸುತ್ತಿದ್ದ ಆಲಂ ಕೆ.ಕೆ.ಗೆ ಬದಲಾಗಿ ಅಲ್ಯೂಮಿನಿಯಂ ಕ್ಲೂರೈಡ್‌ನ್ನು ಬಳಸಲಾಗುತ್ತಿದೆ. ಈ ಕಾರ್ಯ ಕೂಡ ಅಪೂರ್ಣವಾಗಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ನೀರು ಟ್ಯಾಂಕ್‌ಗೆ ಸರಬರಾಜಾಗುತ್ತಿದೆ.
ಆಲಂನ ಟ್ರೀಟ್‌ಮೆಂಟ್ ಘಟಕ ಅತ್ಯಂತ ಶಿಥಿಲವಾಗಿದ್ದು, ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖವಾಗಿ ಇಲ್ಲಿರುವ ಎಲ್ಲಾ ಯಂತ್ರಗಳು ಹಾಗೂ ಶುದ್ದಿಕರಣದ ವಿಧಾನಗಳು ಕಳೆದ ೫೦ ವರ್ಷದ ಹಿಂದಿನದಾಗಿದೆ, ಯಂತ್ರಗಳೆಲ್ಲ ತುಕ್ಕು ಹಿಡಿದಿವೆ. ಅನೇಕ ಯಂತ್ರಗಳು ಕೆಲಸವನ್ನೇ ಮಾಡುತ್ತಿಲ್ಲ. ನದಿ ನೀರಿನಿಂದ ಸರಬರಾಜಾಗುವ ಮಣ್ಣು ಮಿಶ್ರಿತ ನೀರನ್ನು ಈ ಯಂತ್ರಗಳು ತಿರುಗಿಸಿ ಬೇರ್ಪಡಿಸಬೇಕಾಗುತ್ತದೆ. ಆದರೆ ಆ ಯಂತ್ರಗಳೇ ತಿರುಗುತ್ತಿಲ್ಲ, ದೋಷಪೂರಿತ ಯಂತ್ರಗಳೇ ಇವೆ ಎಂದು ದೂರಿದರು.