ಹರಿಹರ : ಡೆಂಗ್ಯೂ ಜ್ವರ ಈಜಿಪ್ಟ್ ಸೊಳ್ಳೆಗಳಿಂದ ಹರಡುತ್ತದೆ ಅದಕ್ಕಾಗಿ ನಮ್ಮ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ ಅಬ್ದುಲ್ ಖಾದರ್ ತಿಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಡೆಂಗ್ಯೂ ಜ್ವರ ಕುರಿತು ಎರಡು ಹಂತದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಜಿಪ್ಪ್ ಸೊಳ್ಳೆಗಳಿಂದ ಹರಡುವ ಸೋಂಕು ಡೆಂಗ್ಯೂ ಜ್ವರ ವಾಗಿದ್ದು ಈ ಸೊಳ್ಳೆಯ ಉತ್ಪನ್ನ ತಾಣ ಮನೆಯ ಸುತ್ತಮುತ್ತ ಇರುವ ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ,ತೆಂಗಿನ ಚಿಪ್ಪು, ಸಂಗ್ರಹಿಸಿದ ನೀರನ್ನು ಮುಚ್ಚಿ ಬಳಸದೇ ಇರುವುದು ಹೀಗೆ ಹಲವು ಕಾರಣಗಳಿವೆ. ಹಾಗಾಗಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕಿದೆ ಎಂದರು.
ಇದೇ ವೇಳೆ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಮಾತನಾಡಿ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳಿಂದ ಜನರು ಖಾಯಿಲೆಗೆ ತುತ್ತಾಗುತ್ತಾರೆ.ಆದರೆ ಡೆಂಗ್ಯೂ ಜ್ವರ ಬಂದು ಮೂರನೇ ಹಂತಕ್ಕೆ ತಲುಪದಲ್ಲಿ ರೋಗ ಪೀಡಿತರು ಬದುಕಿ ಉಳಿಯುವುದು ಕಷ್ಟ. ಆದ್ದರಿಂದ ಯಾವುದೇ ಜ್ವರ ಬರಲಿ ರಕ್ತ ಪರೀಕ್ಷೆ ಮಾಡಿ. ಪ್ರಾರಂಭದಲ್ಲಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಿದರೆ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದ.
ಜಿಲ್ಲಾ ಕೇಂದ್ರ ಶಾಸ್ತ್ರಜ್ಞರಾದ ಸತೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ ಡೆಂಗ್ಯೂ ಜ್ವರದ ಬಗ್ಗೆ ಸಮಗ್ರ ಮಾಹಿತಿ ಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗು ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೂ ಪಿಪಿಟಿ ಮೂಲಕ ತರಬೇತಿಯನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪ ಸ್ಥಿತಿಯಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ರಾಜೇಂದ್ರ ಉಮೇಶ್ ವಹಿಸಿ,ಮಾತನಾಡಿ ನಮ್ಮ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಸದಾ ಕೈ ಜೋಡಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ತಾಲೂಕು ಆಶಾ ಮೇಲ್ವಿಚಾರಕಿ ಕವಿತಾ, ಸ್ವಾಗತವನ್ನು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾಡಿದರೆ, ಕಾರ್ಯ ಕ್ರಮ ನಿರೂಪಣೆಯನ್ನು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಸುಂದರವಾಗಿ ನಡೆಸಿಕೊಟ್ಟರು.
ಈ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆ ದಂತ ವೈದ್ಯಾಧಿಕಾರಿ ಡಾ.ಕಿರಣ್ ನಾಡಿಗೇರ್, ಸಹಾಯಕ ನಿರ್ದೇಶಕ (ಎಂ ಜಿ ಎನ್ ಆರ್ ಇ ಜಿ ) ಸುನಿಲ್, ಶಿಕ್ಷಕರ ಸಂಘದ ಮಾಜಿ ಸದಸ್ಯ ಬಸವ ರಾಜಪ್ಪ, ಡಿ ಎಂ ಓ ಕಚೇರಿಯ ಹಿರಿಯ ಅಧಿಕಾರಿ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಣ್ಣ, ತಾಲೂಕು ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಶ್ರೀಮತಿ ಸುಧಾ ಸೇರಿದಂತೆ ತಾಲೂಕಿನ ಪ್ರೌಢಶಾಲೆ ಶಿಕ್ಷಕರು ಹಾಗೂ ಪಿಡಿಒಗಳು ಭಾಗವಹಿಸಿದ್ದರು.