ಮೈತ್ರಿ ಧರ್ಮ ಪಾಲನೆಯಿಂದ ಪರಿಷತ್ತಿನಲ್ಲಿ ಗೆಲುವು

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಅಭಿಪ್ರಾಯ

ಸಾಗರ: ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಅರ್ಹ ಗೆಲುವು ದೊರೆತಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಡಾ. ಧನಂಜಯ ಸರ್ಜಿ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಭೋಜೆಗೌಡ ಅತಿಹೆಚ್ಚು ಮತ ಪಡೆದು ಆಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.  

ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸಾಗರ ತಾಲ್ಲೂಕಿನಲ್ಲಿ ಅತ್ಯಂತ ಸಕ್ರಿಯವಾಗಿ ಮೈತ್ರಿ ಅಭ್ಯರ್ಥಿಗಳ ಪರ ಅತಿಹೆಚ್ಚು ಮತ ಕೊಡಿಸಲು ಪ್ರಯತ್ನ ನಡೆಸಿ ಯಶಸ್ವಿಯಾಗಿದೆ. ಬಿ.ವೈ.ರಾಘವೇಂದ್ರ 27 ಸಾವಿರ ಮತಗಳ ಲೀಡ್ ಸಾಗರ ಕ್ಷೇತ್ರದಲ್ಲಿ ಪಡೆದಿದ್ದಾರೆ ಎಂದರೆ ಇದರ ಹಿಂದೆ ಜೆಡಿಎಸ್ ಶ್ರಮವೂ ಇದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಜೆಡಿಎಸ್ ಅಭ್ಯರ್ಥಿ ಭೋಜೆಗೌಡ ಪರವಾಗಿ ಮತಪ್ರಚಾರ ನಡೆಸಲಾಗಿತ್ತು ಎಂದ ಅವರು, ರಾಜ್ಯದಲ್ಲಿ ಐದಾರು ಸ್ಥಾನಗಳು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೆಲ್ಲುವಂತೆ ಆಗಿದೆ ಎಂದು ಹೇಳಿದರು.

ಸಾಗರ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ 27 ಸಾವಿರ ಮತಗಳ ಲೀಡ್ ಪಡೆದಿದ್ದಾರೆ. ಇದರಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಜನಪ್ರಿಯತೆ ಕಡಿಮೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ದುರಂಹಕಾರಿ ನಡೆಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಹಿಂದೆ ಚುನಾವಣೆಯಲ್ಲಿ ಸೋತು 13 ವರ್ಷಗಳ ನಂತರ ಜಿಲ್ಲೆಗೆ ಬಂದು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜ್‍ಕುಮಾರ್ ಅವರಿಗೆ ಮತದಾರರು ತಕ್ಕಪಾಠ ಕಲಿಸಿದ್ದಾರೆ. ಬಿ.ವೈ.ರಾಘವೇಂದ್ರ, ಡಾ. ಧನಂಜಯ ಸರ್ಜಿ, ಭೋಜೇಗೌಡರಿಗೆ ಮತ ನೀಡಿದ ಎಲ್ಲರಿಗೂ ಪಕ್ಷವು ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಅಣ್ಣಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಮಾರಪರ್ವ ಆರಂಭವಾಗಲಿದೆ. ಜೆಡಿಎಸ್ ಬಿಜೆಪಿ ಪ್ರತ್ಯೇಕ ಸ್ಪರ್ಧೆ ಮಾಡಿದ್ದರೆ ಮತ ವಿಭಜನೆಯಾಗಿ ಎರಡೂ ಪಕ್ಷಕ್ಕೂ ನಷ್ಟ ಉಂಟಾಗುತಿತ್ತು. ಆದರೆ ಮೈತ್ರಿಯಿಂದ ಎರಡೂ ಪಕ್ಷಕ್ಕೂ ಲಾಭವಾಗಿದೆ. ಕೇಂದ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕೃಷಿಖಾತೆಯನ್ನು ಅಪೇಕ್ಷೆ ಪಟ್ಟಿದ್ದು, ನರೇಂದ್ರ ಮೋದಿಯವರು ಕೃಷಿಖಾತೆ ನೀಡುವ ಮೂಲಕ ಕೃಷಿಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಜಯಲಕ್ಷ್ಮೀ ನಾರಾಯಣಪ್ಪ, ವಸಂತ್ ಶೇಟ್, ವಿನಯಕುಮಾರ್ ಹಾಜರಿದ್ದರು.