Sunday, October 13, 2024
Google search engine
Homeಅಂಕಣಗಳುಲೇಖನಗಳುಆಕ್ಸಿಜನ್ ಕೊರತೆಯಾಗದಂತೆ ಮುಂಜಾಗ್ರತ ಕ್ರಮ : ಕೆ.ಎಸ್.ಈಶ್ವರಪ್ಪ

ಆಕ್ಸಿಜನ್ ಕೊರತೆಯಾಗದಂತೆ ಮುಂಜಾಗ್ರತ ಕ್ರಮ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಈಗಾಗಲೇ ಸ್ಥಗಿತಗೊಂಡಿದ್ದ ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಪುನರ್‌ ಸ್ಥಾಪಿಸಲು ನಿನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಘಟಕಗಳನ್ನು ಪುನರ್ ಸ್ಥಾಪಿಸಲು ಸಂಪೂರ್ಣ ಜವಾಬ್ದಾರಿಯನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದ್ದು, ಅವರು ನಾಳೆ ಬೆಳಿಗ್ಗೆ ೧೧ ಗಂಟೆಗೆ ಭದ್ರಾವತಿಯ ವಿಐಎಸ್‌ಎಲ್‌ನ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ವಿಐಎಸ್‌ಎಲ್‌ನ ಆಕ್ಸಿಜನ್ ತಯಾರಿಕಾ ಘಟಕ ಪ್ರಸ್ತುತ ಸ್ಥಗಿತಗೊಂಡಿದ್ದು, ವಿಐಎಸ್‌ಎಲ್‌ನೊಂದಿಗೆ ಎಂಎಸ್‌ಪಿಎಲ್ ರವರು ಆಕ್ಸಿಜನ್ ಉತ್ಪಾದಿಸಿಕೊಡಲು ಒಪ್ಪಂದ ಮಾಡಿಕೊಂಡಿದ್ದು, ಅದರ ಅವಧಿಯು ಮುಗಿದಿದೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಗನುಗುಣವಾಗಿ ಆಕ್ಸಿಜನ್ ಪೂರೈಕೆ ಮಾಡುವುದು ಸವಾಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ದಾಖಲಾಗಿರುವ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಸೇರಿದಂತೆ ಸುಮಾರು ೧೬ ಕೆಎಲ್‌ಡಿ ಆಕ್ಸಿಜನ್ ದಿನವೊಂದಕ್ಕೆ ಬೇಕಾಗುತ್ತಿದೆ. ಆಕ್ಸಿಜನ್ ಕೊರತೆ ನೀಗಿಸಲು ಕಳೆದ ವಾರ ತಾವು ಹಾಗೂ ಅಧಿಕಾರಿಗಳು ಭದ್ರಾವತಿಯ ವಿಐಎಸ್‌ಎಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಆಕ್ಸಿಜನ್ ಉತ್ಪಾದಿಸಲು ಬೇಕಾಗುವ ಸೌಲಭ್ಯಗಳ ಬಗ್ಗೆ ಚರ್ಚಿಸಿ ಈ ಹಿಂದೆ ಉತ್ಪಾದಿಸುತ್ತಿದ್ದ ಕಂಪನಿಯವರೊಂದಿಗೆ ಮಾತನಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ. ಇನ್ನೆರೆಡು ದಿನದಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದ ಅವರು, ಈ ಘಟಕದಿಂದ ೩೨೦ ಕೆಎಲ್‌ಡಿ ಆಕ್ಸಿಜನ್ ಉತ್ಪಾದನೆಯಾಗಲಿದೆ ಆದರೆ ೮ ಕೆಎಲ್‌ಡಿ ಮಾತ್ರ ಸಿಲಿಂಡರ್‌ಗಳಿಗೆ ತುಂಬಿಸಲು ಸಾಧ್ಯ. ಜಿಲ್ಲೆಗೆ ೧೬ ಕೆಎಲ್‌ಡಿ ಆಕ್ಸಿಜನ್ ಬೇಕಾಗುತ್ತದೆ. ಉಳಿದಿದ್ದನ್ನು ಬೇರೆ ಜಿಲ್ಲೆಗಳಿಗೆ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದರು.

ನಾಳೆ ಭೇಟಿ ನೀಡಲಿರುವ ಜಗದೀಶ್ ಶೆಟ್ಟರ್ ರವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡುವುದರೊಂದಿಗೆ ಆಕ್ಸಿಜನ್ ಕೊರತೆ ಪರಿಹಾರ ಆಗುವ ವಿಶ್ವಾಸವಿದೆ ಎಂದರು.

ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತಿದ್ದೇವೆ. ಸೊರಬದಲ್ಲಿ ೩೦ ಹಾಗೂ ಆನವಟ್ಟಿಯಲ್ಲಿ ೨೦ ಬೆಡ್‌ಗಳ ವ್ಯವಸ್ಥೆ ಮಾಡಿ ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ರೋಗಿಗಳನ್ನು ನಿರ್ವಹಿಸಲು ಮಾನವ ಸಂಪನ್ಮೂಲದ ಹೆಚ್ಚಳ ಕೂಡ ಅವಶ್ಯಕತೆಯಿದ್ದು, ಈ ಹಿನ್ನಲೆಯಲ್ಲಿ ೧೦ ತಜ್ಞರು, ೨೦ ವೈದ್ಯರು, ೨೦ ನರ್ಸ್, ೫ ಡಿ ಗ್ರೂಪ್ ಹಾಗೂ ಒಬ್ಬರು ಲ್ಯಾಬ್‌ಟೆಕ್ನೀಷಿಯನ್ ಇವರ ಸೇವೆಯನ್ನು ೬ ತಿಂಗಳಿಗೆ ಮುಂದುವರೆಸಿ ಸರ್ಕಾರ ಆದೇಶಿಸಿದೆ ಹಾಗೂ ೯೨ ಜನರನ್ನು ೩ ತಿಂಗಳ ಮಟ್ಟಿಗೆ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಜಿಲ್ಲಾಡಳಿತಕ್ಕೆ ಅನುಮತಿ ನೀಡಲಾಗಿದೆ ಎಂದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿದಿನ ೪೫೦ ರಿಂದ ೪೭೫ ರ ವರೆಗೆ ಕೋವಿಡ್ ಒಳರೋಗಿಗಳಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ೧೦೨ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ ೨೫೧೩ ರೋಗಿಗಳಿದ್ದು, ನಿರಂತರವಾಗಿ ಅವರ ಆರೋಗ್ಯವನ್ನು ವಿಚಾರಿಸಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ೧೭೪ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ೨೧೪೩ ಬೆಡ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ೧೪೩೪ ಬೆಡ್‌ಗಳಿವೆ. ಇವುಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ೭೬೫ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ೮೭೫ ಕೋವಿಡ್ ಸೋಂಕಿತರಿಗಾಗಿ ಮೀಸಲಿಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಡಿಹೆಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್‌ನ ನಿರ್ದೇಶಕ ಡಾ.ಸಿದ್ದಪ್ಪ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments