ಕಲಾ ಮಾಂತ್ರಿಕ ರವಿ ಸಂತೇಹಕ್ಲು

ಲೇಖನ : ಸೌಮ್ಯ ಗಿರೀಶ್

ತಂತ್ರಜ್ಞರಿಲ್ಲದೆ ಯಾವ ಸಿನಿಮಾ ಕೂಡಾ ತೆರೆಕಾಣುವುದು ಅಸಾಧ್ಯ. ಕ್ಯಾಮೆರಾಮೆನ್ ನಿಂದ ಹಿಡಿದು ಕೊನೆಗೆ ಬೆಳಕು ಸರಿಯಾಗಿ ಬೀರುವಂತೆ ಲೈಟ್ ಹಿಡಿಯುವ ಲೈಟ್ ಬಾಯ್‌ವರೆಗೂ ತಂತ್ರಜ್ಞರಿಲ್ಲದೆ ಸಿನಿಮಾ ಇಲ್ಲ. ಸಿನಿಮಾ ತಂತ್ರಜ್ಞರಲ್ಲಿ ಮತ್ತೊಂದು ಮಹತ್ತರ ಪಾತ್ರವೆಂದರೆ ಕಲಾ ನಿರ್ದೇಶಕರದ್ದು. ಕಾಣುವ ದೃಶ್ಯವನ್ನು ಸೆರೆಹಿಡಿಯುವುದು ಕ್ಯಾಮೆರಾಮೆನ್ ಆದರೆ ಆ ದೃಶ್ಯಕ್ಕೆ ಪ್ರತಿಯೊಂದು ಅಂಶವನ್ನು ಸಂದರ್ಭ ಮತ್ತು ಭಾವನೆಗೆ ಸುತ್ತಲ ಪರಿಸರ ಹೊಂದುವಂತೆ ಸೃಷ್ಟಿಸುವವನು ಕಲಾ ನಿರ್ದೇಶಕ. ಕುಗ್ರಾಮದ ಗುಡಿಸಲೇ ಇರಲಿ, ಮಹಾರಾಜನ ಆಸ್ಥಾನವಿರಲಿ ಅಥವಾ ಬೆಚ್ಚಿ ಬೀಳಿಸುವ ಭೂತಬಂಗಲಯೇ ಇರಲಿ ಹೀಗೆ ಕಾಡಲ್ಲಿ ನಾಡನ್ನು, ನಾಡಲ್ಲಿ ದೇವಲೋಕವನ್ನು ತಮ್ಮ ಕಲೆಯಿಂದಲೇ ಸೃಷ್ಟಿಸಿ ನೈಜವೆಂಬಂತೆ ತೋರಿಸಬಲ್ಲ ಕಲಾ ಮಾಂತ್ರಿಕ, ಕಲಾ ನಿರ್ದೇಶಕ ರವಿ ಸಂತೆಹಕ್ಲುರ ಕಲೆಯ, ಸಾಧನೆಯ ಹಾದಿಯ ಪರಿಚಯ ಇಲ್ಲಿದೆ.

ತಂತ್ರಜ್ಞರಿಲ್ಲದೆ ಯಾವ ಸಿನಿಮಾ ಕೂಡಾ ತೆರೆಕಾಣುವುದು ಅಸಾಧ್ಯ. ಕ್ಯಾಮೆರಾಮೆನ್ ನಿಂದ ಹಿಡಿದು ಕೊನೆಗೆ ಬೆಳಕು ಸರಿಯಾಗಿ ಬೀರುವಂತೆ ಲೈಟ್ ಹಿಡಿಯುವ ಲೈಟ್ ಬಾಯ್‌ವರೆಗೂ ತಂತ್ರಜ್ಞರಿಲ್ಲದೆ ಸಿನಿಮಾ ಇಲ್ಲ. ಸಿನಿಮಾ ತಂತ್ರಜ್ಞರಲ್ಲಿ ಮತ್ತೊಂದು ಮಹತ್ತರ ಪಾತ್ರವೆಂದರೆ ಕಲಾ ನಿರ್ದೇಶಕರದ್ದು. ಕಾಣುವ ದೃಶ್ಯವನ್ನು ಸೆರೆಹಿಡಿಯುವುದು ಕ್ಯಾಮೆರಾಮೆನ್ ಆದರೆ ಆ ದೃಶ್ಯಕ್ಕೆ ಪ್ರತಿಯೊಂದು ಅಂಶವನ್ನು ಸಂದರ್ಭ ಮತ್ತು ಭಾವನೆಗೆ ಸುತ್ತಲ ಪರಿಸರ ಹೊಂದುವಂತೆ ಸೃಷ್ಟಿಸುವವನು ಕಲಾ ನಿರ್ದೇಶಕ. ಕುಗ್ರಾಮದ ಗುಡಿಸಲೇ ಇರಲಿ, ಮಹಾರಾಜನ ಆಸ್ಥಾನವಿರಲಿ ಅಥವಾ ಬೆಚ್ಚಿ ಬೀಳಿಸುವ ಭೂತಬಂಗಲಯೇ ಇರಲಿ ಹೀಗೆ ಕಾಡಲ್ಲಿ ನಾಡನ್ನು, ನಾಡಲ್ಲಿ ದೇವಲೋಕವನ್ನು ತಮ್ಮ ಕಲೆಯಿಂದಲೇ ಸೃಷ್ಟಿಸಿ ನೈಜವೆಂಬಂತೆ ತೋರಿಸಬಲ್ಲ ಕಲಾ ಮಾಂತ್ರಿಕ, ಕಲಾ ನಿರ್ದೇಶಕ ರವಿ ಸಂತೆಹಕ್ಲುರ ಕಲೆಯ, ಸಾಧನೆಯ ಹಾದಿಯ ಪರಿಚಯ ಇಲ್ಲಿದೆ.

 

ಸಂತೇಹಕ್ಲುನ ತುಂಟ ಪೋರ :
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಒಂದು ಸಣ್ಣ ಗ್ರಾಮ ಸಂತೇಹಕ್ಲು. ಅದೇ ರವಿ ಸಂತೇಹಕ್ಲುರ ಹುಟ್ಟೂರು, ಬೆಳೆದೂರು ಎಲ್ಲವೂ. ಸಾಮಾನ್ಯ ರೈತ ಕುಟುಂಬವಾದ ಅಪ್ಪಯ್ಯ ಗೌಡ ಮತ್ತು ನಾಗಮ್ಮ ದಂಪತಿಗಳ ಮಗ ಇವರು. ಅಪ್ಪನ ಮುಖ ಪರಿಚಯ ಮನದಲ್ಲಿ ಮೂಡುವ ಹೊತ್ತಿಗಾಗಲೇ ಅಪ್ಪ ಮರೆಯಾಗಿದ್ದರು. ಐದು ಜನ ಅಣ್ಣಂದಿರು, ನಾಲ್ಕು ಅಕ್ಕಂದಿರ ಮಧ್ಯೆ ಮುದ್ದಾಗಿ ಬೆಳೆದ ಬಾಲಕ ಅತ್ಯಂತ ತುಂಟ ಪೋರ ಎಂದರೆ ಸುಳ್ಳಲ್ಲ. ಮನೆಯ ಎದುರಿಗಿದ್ದ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪ್ರಾರಂಭವಾಗಿತ್ತು ಆದರೆ ಇವರ ತುಂಟಾಟ ತಾಳಲಾರದೆ ಅದಕ್ಕೊಂದು ಕಡಿವಾಣ ಹಾಕಲು ಇವರನ್ನು ಕಳಿಸಿದ್ದು ತನಿಕಲ್‌ನ ಶೇಖರಪ್ಪ ಮಾಸ್ತರರ ಬಳಿ, ೬ ಮತ್ತು ೭ನೇ ತರಗತಿ ವ್ಯಾಸಂಗಕ್ಕಾಗಿ. ಅಲ್ಲಿಗೂ ಮುಗಿಯದ ಇವರ ಉಪದ್ರವ ಇವರನ್ನು ಕೋಣಂದೂರಿನ ನ್ಯಾಷನಲ್ ಪ್ರೌಢಶಾಲೆಯತ್ತ ಕಳುಹಿಸಿತು. ಹಾಸ್ಟೆಲ್‌ನಲ್ಲಿ ಸ್ನೇಹಿತರೊಂದಿಗೆ ಸೇರಿ ಇನ್ನಷ್ಟು ತುಂಟಾಟ ಹೆಚ್ಚಾಗಿ ಓದಿನ ಕಡೆ ಗಮನ ಕುಸಿಯಿತು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೂಡ ಗಿರ್ಕಿ ಹೊಡೆದು ಬಿದ್ದಿತ್ತು. ಅಷ್ಟು ಹೊತ್ತಿಗಾಗಲೇ ಒಡೆಯನಿಲ್ಲದ ಕುಟುಂಬ ಬಡತನದ ಬೇಗೆಯಲ್ಲಿತ್ತು ಹಾಗಾಗಿ ಕೆಲಸದ ಅನಿವಾರ್ಯತೆ ಒದಗಿ ಬಂತು.

ಬದುಕ ಪಯಣ ಬೆಂಗಳೂರಿನಲ್ಲಿ :
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಸುಧಾಕರ ನಡೆದ ಹಾದಿಯನ್ನೇ ಹಿಡಿದು ೧೯೮೬ರಲ್ಲಿ ಬೆಂಗಳೂರಿಗೆ ಬದುಕನ್ನರಸಿ ಬಂದರು ರವಿ. ಊರಿಂದ ಬಂದ ಬಹುತೇಕ ಹುಡುಗರನ್ನು ಕೆಲಸ ಎಂದೊಡನೆ ಬರ ಸೆಳೆಯುವ ಹೋಟೆಲ್ ಕೆಲಸ ರವಿಯವರನ್ನೂ ತನ್ನತ್ತ ಸೆಳೆಯಿತು. ವಿಲ್ಸನ್ ಗಾರ್ಡನ್‌ನ ಪೂರ್ಣಿಮಾ ಹೋಟೆಲ್‌ನಲ್ಲಿ ಕೆಲಸ ಪ್ರಾರಂಭಿಸಿದರು ರವಿ. ಅಷ್ಟು ಹೊತ್ತಿಗಾಗಲೇ ಇವರ ಅಣ್ಣ ಅನಂತಮೂರ್ತಿರವರು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಗೋಪಿ ಪೀಣ್ಯರ ಒಡನಾಟ ಹೊಂದಿದ್ದರು ಮತ್ತು ಸಹ-ನಿರ್ದೇಶಕರಾಗಿ ಕೂಡ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಿಡುವಿನ ವೇಳೆಯಲ್ಲಿ ಚಿತ್ರೀಕರಣದ ತಾಣಕ್ಕೆ ಹೋಗುತ್ತಿದ್ದರು ರವಿ. ಅಲ್ಲಿಂದ ಸಿನಿಮಾ ಬಗ್ಗೆ ಆಸಕ್ತಿ ಬೆಳೆಯಲು ಆರಂಭವಾಗಿತ್ತು. ಅಣ್ಣನಿಗೆ ತಮ್ಮ ಓದಬೇಕು, ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆ ಹಾಗಾಗಿ ಅಣ್ಣನ ಒತ್ತಾಯಕ್ಕೆ ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮುಂದುವರಿಸಿದರಾದರೂ ವಿದ್ಯೆಗೂ ಇವರಿಗೂ ನಂಟು ಬೆಳೆಯಲೇ ಇಲ್ಲ. ಕೊನೆಗೆ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಗೋಪಿ ಪೀಣ್ಯರ ಗರಡಿಯಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಪ್ರಾರಂಭಿ ಸಿದರು ರವಿ. ಉಂಡೂ ಹೋದ ಕೊಂಡೂ ಹೋದ ಸಿನಿಮಾದ ಸಹ-ನಿರ್ದೇಶನ ಪ್ರಾರಂಭಿಸಿದ ಇವರು ಬಾ ನಲ್ಲೆ ಮಧುಚಂದ್ರಕೆ, ಅಮೆರಿಕಾ ಅಮೆರಿಕಾ, ಹೂಮಳೆ, ಅಮೃತವರ್ಷಿಣಿ ಹೀಗೆ ಹತ್ತು ಹಲವು ಸಿನಿಮಾಗಳಿಗೆ ಸಹ-ನಿರ್ದೇಶನ ಮಾಡುತ್ತಲೇ ಬಂದರು. ಇವರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಕಲಾ ನಿರ್ದೇಶಕರಾದ ಶಶಿಧರ್ ಅಡಪ.
ಕಲೆಗೆ ಅಡಪರ ಅಡಿಪಾಯ ಸಹೋದರರು ಇಬ್ಬರೂ ಸಹ-ನಿರ್ದೇಶಕರಾಗಿರುವುದು ಬೇಡ, ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಿ. ಈ ಹುಡುಗನ್ನ ನನ್ನ ಜೊತೆ ಕಳುಹಿಸಿ, ಇವನನ್ನ ನಾನು ತಯಾರಿ ಮಾಡ್ತೀನಿ ಎಂದು ನಾಗತಿಹಳ್ಳಿಯವರಿಗೆ ಹೇಳಿದ ಅಡಪರು ರವಿಯವರ ಕಲಾ ಹಾದಿಗೆ ಅಡಿಪಾಯ ಹಾಕಿದ್ದರು. ಅಂದಿನಿಂದ ಪ್ರಾರಂಭವಾಯಿತು ರವಿ ಕಲಾಯಾನ. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ ಈ ಕಲಾವಿದ.

ಸಹ-ಕಲಾನಿರ್ದೇಶಕನಾಗಿ ನಿಬ್ಬೆರಗಾಗಿಸಿದ ಯುವಕ :
ಕಲಿಯುವ ಶ್ರದ್ಧೆ ಇದ್ದದ್ದರಿಂದ ಮತ್ತು ಅಡಪರ ಅದ್ಭುತ ಗರಡಿಯ ತಳಹದಿ ಇವರನ್ನು ಒಬ್ಬ ಕಲಾವಿದನಾಗಿ ರೂಪಿಸಿತ್ತು. ನಂತರದ ದಿನಗಳಲ್ಲಿ ಸಹ-ಕಲಾನಿರ್ದೇಶಕನಾಗಿ ರವಿ ಕೆಲಸ ಮಾಡಿದ್ದೆಲ್ಲಾ ಖ್ಯಾತನಾಮರಾದ ಗಿರೀಶ್‌ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಮ್, ಪಿ.ಶೇಷಾದ್ರಿಯವರಂಥ ನಿರ್ದೇಶಕರ ಗರಡಿಯಲ್ಲಿ. ಕಲಾತ್ಮಕ ಸಿನಿಮಾಗಳು ಕಲಿಕಾ ಕೇಂದ್ರಗಳಾಗಿದ್ದೂ ಕೂಡ ಸುಳ್ಳಲ್ಲ. ಕಾನೂರು ಹೆಗ್ಗಡತಿಯ ಕಾನೂರಿನ ಚಿತ್ರಣವಾಗಲಿ, ದ್ವೀಪದಲ್ಲಿನ ಆ ತುಳುನಾಡ ಪರಿಸರವನ್ನಾಗಲಿ, ಕೂರ್ಮಾವತಾರ ಮತ್ತು ಹಸೀನಾದ ಸರಳ ಎನಿಸುವ ಸಹಜ ವಾತಾವರಣವನ್ನು ಸೃಷ್ಟಿಸಿದ್ದಾಗಲಿ ಎಲ್ಲವೂ ಇವರ ಸಹ-ಕಲಾನಿರ್ದೇಶನದಲ್ಲಿ ಬಂದತಂಹದ್ದು. ಯೋಗರಾಜ ಭಟ್ಟರ ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ ಸೇರಿದಂತೆ ಸೂರಿಯವರ ಕಡ್ಡಿಪುಡಿ, ಅಣ್ಣಾಬಾಂಡ್, ಜಂಗ್ಲಿ ಹೀಗೆ ಒಟ್ಟು ೪೦ ಚಿತ್ರಗಳಿಗೆ ಸಹ-ಕಲಾನಿರ್ದೇಶಕರಾಗಿ ಕಲೆಯನ್ನು ಕರಗತ ಮಾಡಿಕೊಂಡರು ರವಿ. ನಮ್ಮ ಕೊಡಚಾದ್ರಿ ನಮ್ಮ ಹೆಮ್ಮೆ. ಗಾಳಿಪಟ ಸಿನಿಮಾಕ್ಕಾಗಿ ಕೊಡಚಾದ್ರಿ ಮೇಲೆ ಸೆಟ್ ಹಾಕಬೇಕಿತ್ತು. ಅಲ್ಲಿಗೆ ಯಾವ ಗಾಡಿಯೂ ಹೋಗದು, ಏನೇ ಇದ್ದರೂ ಹೆಗಲ ಮೇಲೆ ಹೊತ್ತೊಯ್ಯಬೇಕು. ಎಷ್ಟೋ ಮಂದಿ ಆಗುವುದಿಲ್ಲ ಎಂದು ಕೈಚಲ್ಲಿದ್ದರು, ಇದನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿ ತೋರಿಸಿದೆ. ಇಂದಿಗೂ ಗಾಳಿಪಟ ಸಿನಿಮಾ ಪರದೆಯ ಮೇಲೆ ನೋಡಿದಾಗ ರೋಮಾಂಚನ ಆಗುತ್ತದೆ ಎನ್ನುವ ಅವರ ಮಾತುಗಳಲ್ಲೇ ತಿಳಿಯುತ್ತದೆ ಕಾಣುವಷ್ಟು ಸುಲಭವಲ್ಲ ದೃಶ್ಯ ಸೃಷ್ಟಿ ಎಂದು. ಇದರ ನಡುವೆ ಹಲವಾರು ಸಾಕ್ಷ್ಯಚಿತ್ರ, ಜಾಹೀರಾತುಗಳಲ್ಲೂ ಕೆಲಸ ಮಾಡಿದ ರವಿ, ಎಸ್.ರಾಮಚಂದ್ರ. ಚಿಟ್ಟಿ ಬಾಬು, ಪಿ.ಸಿ.ಶ್ರೀರಾಮ್, ಸತ್ಯಹೆಗಡೆಯಂತಹ ಇನ್ನೂ ಅನೇಕ ಘಟಾನುಗಟಿಗಳ ಜೊತೆ ಕೆಲಸ ನಿರ್ವಹಿಸಿದ ಅನುಭವವನ್ನೂ ಪಡೆದುಕೊಂಡರು. ಇಷ್ಟೇ ಅಲ್ಲದೆ ನಟನಾಗಿಯೂ ಸಹ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಇವರು.

ಕಲಾ ನಿರ್ದೇಶಕರಾಗಿ ಹಾಕಿದ ಗೂಗ್ಲಿ ಇಂದು ಹೆಬ್ಬುಲಿಯಾಗಿ ಬೆಳೆದು ನಿಂತಿದೆ :
ಜಯಣ್ಣ-ಭೋಗೇಂದ್ರರ ಸೂಪರ್ ಹಿಟ್ ಸಿನಿಮಾ ಗೂಗ್ಲಿ, ಇದು ರವಿ ಸಂತೇಹಕ್ಲು ಸ್ವತಂತ್ರ ಕಲಾನಿರ್ದೇಶಕರಾಗಿ ಗುರುತಿಸಿಕೊಂಡ ಚಿತ್ರ. ಅಲ್ಲಿಂದ ಪ್ರಾರಂಭಿಸಿದ ಇವರ ಪಯಣ ಇಂದು ಹೆಬ್ಬುಲಿವರೆಗೆ ಬೆಳೆದಿದೆ. ಜಯಮ್ಮನ ಮಗ ಚಿತ್ರದ ಮಾಂತ್ರಿಕ ಜಗತ್ತೇ ಇರಲಿ, ಬಹದ್ದೂರ್ನ ಭರ್ಜರಿ ಸೆಟ್ ಇರಲಿ, ಇನ್ನೂ ಮಮ್ಮಿ ಚಿತ್ರದ ಭಯ ಹುಟ್ಟಿಸುವ ಪ್ರತಿಯೊಂದು ಫ್ರೇಮ್ ಇರಲಿ ಎಲ್ಲವೂ ಇವರ ಕೈಯಲ್ಲಿ ಅರಳಿದ ಕಲಾಸಿರಿ. ಬರಿ ನಾಲ್ಕು ಗೋಡೆಯಾಗಿದ್ದ ಪ್ರಿಯಾಂಕ ಉಪೇಂದ್ರರ ಹಳೆಯ ಮನೆಯೊಂದಕ್ಕೆ ತಮ್ಮ ಕಲೆ ಮತ್ತು ಕೈಚಳಕದಿಂದ ಕೊಟ್ಟ ರೂಪ ಮಮ್ಮಿ ಚಿತ್ರದ ಆ ಭೂತಬಂಗಲೆ. ಇನ್ನು ದೃಶ್ಯ ಚಿತ್ರದ ಪ್ರತಿ ಚಿತ್ರಣವೂ ಇವರ ಕಲೆಯಲ್ಲಿ ಮೂಡಿರುವುದು. ಪಿ.ವಾಸು ಅವರ ಸಾಂಗತ್ಯದಲ್ಲಿ ಬಂದ ಮತ್ತೊಂದು ಯಶಸ್ವಿ ಚಿತ್ರ ಶಿವಲಿಂಗ, ಇದರ ಕ್ಲೈಮಾಕ್ಸ್‌ನಲ್ಲಿ ಹಾರುವ ಪ್ರತಿಯೊಂದು ಟೇಬಲ್‌ನಿಂದ ಹಿಡಿದು ನಡುಕ ಹುಟ್ಟಿಸುವ ಸ್ಮಶಾನದ ಸೆಟ್‌ವರೆಗೂ ಎಲ್ಲವೂ ಜನರ ಮನದಲ್ಲಿ ಉಳಿಯುವಂಥದ್ದು. ದ್ಯಾವ್ರೇ, ಜಯಲಲಿತಾ, ಚಾರ್ಲಿ, ಎಂದೆಂದೂ ನಿನಗಾಗಿ, ಕೃಷ್ಣಲೀಲಾ, ಪರಪಂಚ, ಡಾರ್ಲಿಂಗ್, ರಾಟೆ, ಹೀಗೆ ಒಟ್ಟು ಹದಿನಾರು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದಾರೆ ರವಿ. ನಾನು ಇಂದು ಏನಾದರೂ ಕಲೆ ಅರಳಿಸುತ್ತೇನೆ ಎಂದರೆ ಅದೆಲ್ಲಕ್ಕೂ ಮೂಲ ನನ್ನ ಹಳ್ಳಿ ಜೀವನ ಎಂದರೆ ತಪ್ಪಿಲ್ಲ. ಕುರಿ ಕಾಯುವ ಕುರುಬನದ್ದೊಂದು ಕಲೆಯಾದರೆ, ಹಳ್ಳಿಯ ಜಗಲಿ, ಗದ್ದೆ, ಜಾತ್ರೆಗಳು ಕಲಿಸುವ ಪಾಠವೇ ಬೇರೆ. ಹುಲ್ಲಿನ ಬಣವೆ ಕಟ್ಟುವುದರಲ್ಲೂ ಕಲೆಯಿದೆ. ದೈನಂದಿನ ಜೀವನ ಕಲಿಸುವ ಕಲೆ ಯಾವ ಯೂನಿವರ್ಸಿಟಿನೂ ಕಲಿಸಲ್ಲ. ಒಕ್ಕಲುತನ ಮಾಡುತ್ತಲೇ ಹಲವು ವಿಷಯ ಕಲಿತಾ ಇದ್ವಿ ಬಾಲ್ಯದಲ್ಲಿ. ಅಂತಾನೆ ತಮ್ಮ ಇಂದಿನ ವ್ಯಸ್ಥ ಬದುಕಲ್ಲೂ ತಮ್ಮ ಹಳ್ಳಿಯ ಜೀವನವನ್ನು ನೆನಪಿಸಿಕೊಂಡರು ರವಿ. ಅತ್ಯಂತ ನಿರೀಕ್ಷೆ ಮೂಡಿಸಿರುವ ಹೆಬ್ಬುಲಿ ಚಿತ್ರದ ಕಲಾ ನಿರ್ದೇಶನ ಕೂಡ ರವಿಯವರದ್ದೇ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಿತಾದರೂ ಎಷ್ಟೋ ದೃಶ್ಯಗಳಿಗಾಗಿ ಕಾಶ್ಮೀರವನ್ನು ಬೆಂಗಳೂರಿನಲ್ಲಿ ಸೃಷ್ಟಿಸಿದ್ದಾರೆ ರವಿ. ಒಂದೆಡೆ ಕೃಷ್ಣರವರ ನಿರ್ದೇಶನ, ಎದುರಿಗೆ ನಿಂತಿರುವುದು ಸುದೀಪ್ ಸರ್ ಮತ್ತು ರವಿಚಂದ್ರನ್ ಸರ್, ಒಂದು ಕ್ಷಣ ಎದೆ ನಡುಗಿತು. ಇಬ್ಬರೂ ಸಿನಿಮಾದ ಇಂಚಿಂಚನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಇದು ಹೀಗೆ ಬರಬೇಕೆಂದು ಖಚಿತವಾಗಿ ಹೇಳುತ್ತಾರೆ. ಅಂಥವರ ಎದುರು ಕೆಲಸ ಮಾಡಿ ಸೈ ಎನಿಸಿಕೊಳ್ಳುವುದಿರಲಿ ಸರಿ ಎನಿಸಿಕೊಳ್ಳುವುದೇ ಸಾಧನೆ ಇದ್ದಂತೆ. ಹೆಬ್ಬುಲಿ ಅಂಥದ್ದೊಂದು ಅವಕಾಶದ ಜೊತೆಗೆ ನಿರೀಕ್ಷೆಗಿಂತ ಅದ್ಭುತವಾಗಿ ಮೂಡಿಬಂದದ್ದು ನಿಜಕ್ಕೂ ಖುಷಿ ಎನ್ನುತ್ತಲೇ ತಮ್ಮ ಅನುಭವ ಹಂಚಿಕೊಂಡರು. ಇವರ ಹೆಬ್ಬುಲಿ ಇವರ ಸಾಧನೆಯ ಹಾದಿಯ ಯಶಸ್ವಿ ಮೈಲಿಗಲ್ಲಾಗಲಿ ಎನ್ನುವುದೇ ನಮ್ಮ ಹಾರೈಕೆ.

20 ವರ್ಷಗಳ ತಪ್ಪಸ್ಸಿಗೆ ಒಲಿದದ್ದು ರಾಜ್ಯ ಪ್ರಶಸ್ತಿಯ ಗರಿ:
ಎರಡು ಕಾಲಮಾನದ ಕಥೆ ಹೇಳುವ ಭಜರಂಗಿ ಸಿನಿಮಾದ ಒಂದೊಂದು ಫ್ರೇಮ್‌ನಲ್ಲೂ ಕಲೆಗೆ ಪ್ರಾಮುಖ್ಯತೆ ಇತ್ತು. ಆ ಆಜಾನುಬಾಹು ಆಂಜನೇಯನ ಪ್ರತಿಮೆ ಇರಲಿ ಗಜೇಂದ್ರಗಢ ಎಂಬ ಕಾಲ್ಪನಿಕ ಕಾಡುವಾಸಿಗಳ ನೆಲೆಯಿರಲಿ ಎಲ್ಲವೂ ಇವರ ಸೃಷ್ಠಿಯೇ. ಬೆಂಗಳೂರಿನ ಮಹಾನಗರದ ಅರಮನೆಯ ಆವರಣದಲ್ಲಿರುವ ಸಪೋಟ ತೋಟದಲ್ಲಿ ಗಜೇಂದ್ರ ಗಢ ನಿರ್ಮಿತವಾಗಿತ್ತು ಎಂದರೆ ಯಾರು ತಾನೆ ನಂಬಲು ಸಾಧ್ಯ. ಅದೇ ಒಬ್ಬ ಕಲಾವಿದನ ಕಲಾ ನೈಪುಣ್ಯತೆಗಿರುವ ಶಕ್ತಿ. ಇವರ ಈ ಪರಿಶ್ರಮಕ್ಕೆ ಸಂದ ಗೌರವವೇ ೨೦೧೩-೧೪ನೇ ಸಾಲಿನ ಶ್ರೇಷ್ಠ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ.
ನಡೆದು ಬಂದ ಹಾದಿಯನ್ನು ಮರೆಯದ, ಯಶಸ್ಸನ್ನು ಕಿರೀಟವಾಗಿಸಿಕೊಳ್ಳದೆ ಕಲಿಯುವುದು ಬಹಳ ಇದೆ. ನನಗೆ ಕಾಣುವ ಪ್ರತಿಯೊಂದು ವ್ಯಕ್ತಿಯಿಂದಲೂ ಏನಾದರೂ ಕಲಿಯುತ್ತಲೇ ಇರುತ್ತೇನೆ. ನನ್ನ ಕಲಾ ಗುರುಗಳಾದ ಅಡಪರು, ಅಪ್ಪನ ಸ್ಥಾನದಲ್ಲಿ ನಿಂತು ಬೆಳೆಸಿದ ಅಕ್ಕ-ಭಾವ, ಬದುಕು ಕಟ್ಟಿಕೊಟ್ಟ ಅಣ್ಣ, ನಂಬಿ ಕೆಲಸ ಕೊಟ್ಟ ನಿರ್ಮಾಪಕ-ನಿರ್ದೇಶಕರು, ನನ್ನ ತಂಡ, ನನ್ನ ಜೊತೆ ಕೈಜೋಡಿಸಿ ಬೆವರು ಹರಿಸುವ ಪ್ರತಿಯೊಬ್ಬರೂ ಕಾರಣ ಈ ರವಿ ಗುರುತಿಸಿಕೊಳ್ಳಲು ಎನ್ನುವ ಇವರ ಸರಳ ಮನೋಭಾವವೇ ಇವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಇವರ ಕಲಾ ಸೇವೆ ಹೀಗೇ ಮುಂದುವರೆಯಲಿ, ಮತ್ತಷ್ಟು-ಮಗದಷ್ಟು ಯಶಸ್ಸು ಇವರಿಗೆ ಸಿಗಲಿ ಎನ್ನುವುದೇ ನಮ್ಮ ಹಾರೈಕೆ.