ಆರೋಗ್ಯಕರ ಮೈಕಟ್ಟೇ ನನ್ನ ಗೆಲುವಿನ ಗುಟ್ಟು – ರಘು ರಾಮಪ್ಪ

ಲೇಖನ: ಸೌಮ್ಯ ಗಿರೀಶ್

ರಘು ರಾಮಪ್ಪ ಕಿರುತೆರೆ ಮತ್ತು ಬೆಳ್ಳಿತೆರೆಗೆ ಪರಿಚಯವಾಗುವ ಮುಂಚೆಯೇ ಮನೆ ಮಾತಾಗಿದ್ದು ಅವರ ದೇಹಾದಾರ್ಢ್ಯದಿಂದ. ರಘು ರಾಮಪ್ಪರವರು ರಾಷ್ಟ್ರಮಟ್ಟದ ಹಲವು ಬಾಡಿ ಬಿಲ್ಡಿಂಗ್ ಸ್ಪರ್ದೆಗಳಲ್ಲಿ ಗೆದ್ದು ರಾಷ್ಟ್ರಮಟ್ಟದ ಕಿರೀಟವನ್ನು ನಮ್ಮ ಮುಡಿಗೇರಿಸಿಕೊಂಡಿದ್ದಾರೆ. ಟಿವಿ ಶೋಗಳು, ಎರಡು ಚಿಲನಚಿತ್ರ, ಬಾಡಿಬಿಲ್ಡಿಂಗ್ ಜೊತೆಗೆ ವ್ಯಂಗ್ಯಚಿತ್ರಕಾರ ಕೂಡ ಆಗಿದ್ದಾರೆ ರಘು ರಾಮಪ್ಪ. ಇಂತಹ ಸಾಧಕ ನಮ್ಮ ಶಿವಮೊಗ್ಗದವರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ನಮ್ಮೂರ ಸಾಧಕನ ಪರಿಶ್ರಮದ ಪರಿಚಯ ಹಲವರಿಗೆ ಎಚ್ಚರಿಕೆಯ ಕರೆಗಂಟೆಯೂ ಹೌದು.


ಇವರು ನಮ್ಮ ಮಲೆನಾಡಿನ ಮಡಿಲಿನವರು
ಅಮ್ಮನ ಹುಟ್ಟೂರು ಹೊಸನಗರ, ಅಪ್ಪನ ಹುಟ್ಟೂರು ಸೊರಬ ಮತ್ತು ಈ ಯುವ ಸಾಧಕ ಹುಟ್ಟಿದ್ದು ಹೊಸನಗರದಲ್ಲಿ. ಅಜ್ಜಿ, ತಾತನ ಮನೆ, ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಹೀಗೆ ಎಲ್ಲರೂ ಶಿವಮೊಗ್ಗದಲ್ಲೇ ಇರುವವರು, ಹಾಗಾಗಿ ಶಿವಮೊಗ್ಗ, ಮಲೆನಾಡು ಎಂದರೆ ಸಾಕು ಈ ಹುಡುಗನಿಗೆ ಏನೋ ಒಂದು ಖುಷಿ ಮತ್ತು ಪ್ರೀತಿ. ನಾನು ಮಲೆನಾಡ ಹುಡುಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಂದೆಯಿಂದ ಸಿಕ್ಕ ಬಳುವಳಿ ಬಾಡಿಬಿಲ್ಡಿಂಗ್
ತಂದೆ ಪ್ರಸಿದ್ಧ ದೇಹದಾರ್ಢ್ಯ ಪಟು ರಾಮಪ್ಪನವರು. ಕಳೆದ ೪೦ ವರ್ಷಗಳಿಂದ ದೇಹದಾರ್ಢ್ಯಗೊಳಿಸಲು ರಾಮಪ್ಪನವರು ದೇಹವನ್ನು ದಂಡಿಸುತ್ತಾ ಬಂದಿದ್ದಾರೆ. ತಂದೆಯ ಸಾಧನೆ ಮಗನಾದ ರಘು ರಾಮಪ್ಪನಿಗೆ ಬಾಡಿಬಿಲ್ಡಿಂಗ್‌ಗೆ ಸ್ಫೂರ್ತಿ ನೀಡಿತು. ಆದರೆ ದೇಹದಾರ್ಢ್ಯ ಸುಲಭದ ಕೆಲಸವಲ್ಲ, ಅಹೋ ರಾತ್ರಿಯಲ್ಲಿ ಆಗುವುದೂ ಅಲ್ಲ. ವರ್ಷಗಟ್ಟಲೆ ಅದನ್ನು ತಪ್ಪಸ್ಸಿನಂತೆ ಶ್ರದ್ಧೆಯಿಂದ ಮಾಡಿದಾಗ ಮಾತ್ರ ಸಾಧಿಸಬಹುದಾದದ್ದು. ರಘು ರಾಮಪ್ಪನವರ ಸಹೋದರ ಎಂದಿಗೂ ದೇಹದಾರ್ಢ್ಯದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಅವರ ಒಲುಮೆ ಫೋಟೋಗ್ರಫಿಯತ್ತ, ಇಂದಿಗೂ ಒಂದು ದಿನವೂ ಜಿಮ್ ಒಳಗೆ ಕಾಲಿಟ್ಟವರಲ್ಲ ಅವರು. ತಂದೆಯ ಹಾದಿ ಮಗ ಹಿಡಿಯುವುದು, ಅದರಲ್ಲೂ ಬಾಡಿಬಿಲ್ಡಿಂಗ್‌ನಲ್ಲಿ ಸುಲಭದ ನಿರ್ಧಾರವಲ್ಲ. ಮನಸ್ಸಿನ ಗಟ್ಟಿ ನಿಲುವು ರಘು ರಾಮಪ್ಪ ಈ ಕಠಿಣ ಹಾದಿಯನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಿತು.

ಬಾಡಿಬಿಲ್ಡಿಂಗ್ ಅಂದ್ರೆ ಶೋಕಿ ಅಲ್ಲ
ಈಗಿನ ಬಹುತೇಕ ಯುವಕರು ಯಾವುದೋ ನಾಯಕ ನಟನ ಸಿಕ್ಸ್ ಪ್ಯಾಕ್ ಅಥವಾ ಏಯ್ಟ್ ಪ್ಯಾಕ್ ನೋಡಿ ಬಾಡಿಬಿಲ್ಡಿಂಗ್‌ಗೆ ಧುಮುಕಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಬಂದ ಮೇಲೆ ಧಿಡೀರನೆ ಎರಡು ಮೂರು ತಿಂಗಳಲ್ಲಿ ಬಾಡಿಬಿಲ್ಡರ್ ಆಗಿಬಿಡಬೇಕೆಂದು ಹಾತೊರೆಯುತ್ತಾರೆ. ಆದರೆ ರಘು ರಾಮಪ್ಪ ಹೇಳುವುದೇ ಬೇರೆ. ಮೂರು ತಿಂಗಳಲ್ಲಿ ಯಾರೂ ದೇಹಧಾರ್ಢ್ಯ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಹ ಬೆಳೆಸಿಕೊಳ್ಳಬಹುದು, ಬೆಳೆದ ದೇಹವೆಲ್ಲ ದಾರ್ಢ್ಯವಲ್ಲ. ದಾರ್ಢ್ಯ ಎಂಬ ಪದವೇ ಹೇಳುವಂತೆ ಅದು ಬಲ. ಬಲವಿಲ್ಲದ ದೇಹ ಸುಮ್ಮನೆ ಬೆಳೆದರೆ ಅದು ಬಾಡಿಬಿಲ್ಡಿಂಗ್ ಆಗುವುದಿಲ್ಲ. ವರ್ಷಗಟ್ಟಲೆ ದೇಹದಂಡಿಸಬೇಕು, ಆರೋಗ್ಯಕರ ಆಹಾರ ಕ್ರಮ, ದಿನಿ ನಿತ್ಯದ ಚಟುವಟಿಕೆಗಳು ಕ್ರಮಬದ್ಧವಾಗಿರುವುದರೊಂದಿಗೆ ನೈಸರ್ಗಿಕವಾಗಿ ದೇಹ ಬೆಳೆಯಬೇಕು.

ಯುವ ಬಾಡಿಬಿಲ್ಡರ್‌ಗಳಿಗೆ ಫಿಟ್ನೆಸ್ ಕನ್ಸಲ್ಟೆಂಟ್ ರಘು ರಾಮಪ್ಪರ ಕಿವಿಮಾತು
ಈಗ ಬಾಡಿಬಿಲ್ಡಿಂಗ್‌ನ ಹುಚ್ಚು ಎಷ್ಟಿದೆ ಎಂದರೆ ದೇಹ ಬೆಳೆಸಿಕೊಳ್ಳುವುದಕ್ಕಾಗಿ ಅನವಶ್ಯಕ ಮದ್ದುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ ಯುವ ಪೀಳಿಗೆ. ನೈಸರ್ಗಿಕವಾಗಿ ದೇಹ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ, ಇದು ನಾವು ಕಸರತ್ತು ಮಾಡಲು ಶಕ್ತಿ ನೀಡುತ್ತದೆ. ಆದರೆ ಅಹೋರಾತಿಯಲ್ಲಿ ಬಾಡಿಬಿಲ್ಡರ್ ಆಗಬೇಕು, ಹಾಗಾಗಿ ಹೆಚ್ಚು ಶಕ್ತಿ ಬೇಕು ಎಂದು ಇಂಜೆಕ್ಷನ್‌ಗಳು, ಮಾತ್ರೆಗಳನ್ನು ಸೇವಿಸುವ ಕೆಟ್ಟ ಪರಂಪರೆಯತ್ತ ಜಿಂಗಳು ಸಾಗುತ್ತಿವೆ. ಇದೊಂದು ಕ್ಯಾನ್ಸರ್‌ನಂತೆ ಹರಡಿದೆ. ಇವೆಲ್ಲವೂ ತುಂಬಾ ಆತಂಕ ಮೂಡಿಸುತ್ತದೆ. ಇಂತಹ ಔಷಧಗಳು ಇಂದು ಶಕ್ತಿ ಹೆಚ್ಚಿಸಬಹುದು ಆದರೆ ಇದರ ಅಡ್ಡಪರಿಣಾಮಗಳಿಂದ ಎಷ್ಟೋ ಜನ ಕಿಡ್ನಿ, ಲಿವರ್‌ಗಳ ವೈಫಲ್ಯತೆ ಅಷ್ಟೇ ಅಲ್ಲದೆ ಮಕ್ಕಳಿಲ್ಲ ಎಂಬ ನೋವಿಗೂ ತುತ್ತಾಗಿದ್ದಾರೆ. ಅದಕ್ಕಾಗಿಯೇ ನನ್ನ ಕಿವಿ ಮಾತು ಎಂದರೆ ಬಾಡಿಬಿಲ್ಡಿಂಗ್ ಮಾಡಬೇಕಾದರೆ ನಿಮ್ಮ ಜೀವನಶೈಲಿ ಉತ್ತಮಗೊಳಿಸಿ, ನೈಸರ್ಗಿಕವಾಗಿ ಸಿಗುವ ಆಹಾರ, ಡಯಟ್ ಪಾಲಿಸಿ, ಯಾವುದೂ ಧಿಡೀರನೇ ಆಗುವುದಿಲ್ಲ, ಧಿಡೀರನೆ ಆಗಿದ್ದು ಹೆಚ್ಚು ಕಾಲ ಉಳಿಯುವುದಿಲ್ಲ. ದೇಹದಾರ್ಢ್ಯ ಮಾಡಿಕೊಳ್ಳುವುದು ಆರೋಗ್ಯಕರ ದೇಹಕ್ಕಾಗಿ ಅದಕ್ಕೆ ಅನಾರೋಗ್ಯಕರ ಮಾರ್ಗ ಎಷ್ಟು ಸರಿ ನೀವೇ ಯೋಚಿಸಿ ಎನ್ನುತ್ತಾರೆ ಫಿಟ್‌ನೆಸ್ ಕನ್ಸಲ್ಟೆಂಟ್ ಕೂಡ ಆಗಿರುವ ರಘು ರಾಮಪ್ಪ.

ಬಾಡಿಬಿಲ್ಡಿಂಗ್‌ನಲ್ಲಿ ರಘು ರಾಮಪ್ಪ ಸಾಧನೆ
೨೦೦೫ರಲ್ಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಘು ರಾಮಪ್ಪನವರು ೨೦೦೫ ರಿಂದ ೨೦೧೪ರವರೆಗೆ ಅವರು ಯಾವುದೇ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಏಕೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ದಿಗ್ಭ್ರಮೆ ಮೂಡಿಸುವಂತಹದ್ದು. ಈ ಅನಾರೋಗ್ಯಕರ ಹಾದಿ ಹಿಡಿದು ಅಳೆತೆಗೂ ಮೀರಿ ದೇಹಬೆಳೆಸಿಕೊಳ್ಳುವವರ ಮಧ್ಯೆ ಕಾಂಪೀಟ್ ಮಾಡಿ ಗೆಲ್ಲುವುದು ಒಬಾ ನ್ಯಾಚುರಲ್ ಬಾಡಿಬಿಲ್ಡರ್‌ಗೆ ನಿಜಕ್ಕೂ ಕಷ್ಟ ಎಂದು ನೋವಿನಿಂದಲೇ ನುಡಿದರು. ಹಾಗಾದರೆ ೨೦೧೪ ರಲ್ಲಿ ಹೇಗೆ ಗೆದ್ದರು? ಇವರೂ ಅದೇ ದಾರಿ ಹಿಡಿದರೆ? ಈ ರೀತಿಯ ಅನುಮಾನಗಳು ಸಹಜ. ಆದರೆ ರಘು ರಾಮಪ್ಪ ಎಂದೂ ತಂದೆ ಕಲಿಸಿದ ನೈಸರ್ಗಿಕ ಸೂತ್ರವನ್ನು ಬಿಟ್ಟು ಹೋದವರಲ್ಲ. ೨೦೧೪ರಲ್ಲಿ ನಡೆದ ಮಸಲ್ ಮೇನಿಯಾ ಇಂಡಿಯಾ ಲಯಟ್‌ವೇಯ್ಟ್ ಚ್ಯಾಂಪಿಯನ್‌ಶಿಪ್ ಸ್ಫರ್ದೆಯ ರೂಪುರೇಶೆಯೇ ಹಾಗಿತ್ತು. ಸ್ಫರ್ದಿಸುವ ಪ್ರತಿ ಸ್ಫರ್ದಿಯ ರಕ್ತದ ಸ್ಯಾಂಪಲ್ ಪಡೆದು ಅವರ ದೇಹವು ನೈಸರ್ಗಿಕವಾಗಿ ದಾರ್ಢ್ಯತೆಯನ್ನು ಹೊಂದಿದೆ ಎಂದು ಧೃಢೀಕರಿಸಿದ ಮೇಲಷ್ಟೇ ಪ್ರವೇಶ ಎಂಬ ನಿಂಬದನೆಯನ್ನು ಈ ಸ್ಪರ್ಧೆ ಒಡ್ಡಿತ್ತು. ನಿರೀಕ್ಷಿಸಿದ್ದ ಆ ದಿನ ಒದಗಿಬರಹುದು ಎಂದು ಎಣಿಸಿರದ ರಘು ರಾಮಪ್ಪರವರಿಗೆ ಇದು ಅತ್ಯಂತ ಸಂತಸ ತಂದುಕೊಟ್ಟ ವಿಷಯ. ಕೊಂಚವೂ ತಡ ಮಾಡದೆ ಭಾಗವಹಿಸಿದ್ದು ಮಾತ್ರವಲ್ಲ ಆ ಸ್ಫರ್ದೆಯಲ್ಲಿ ವಿಜೇತರಾಗಿ ಕಿರೀಟವನ್ನು ಧರಿಸಿ ೨೦೦೫ರಿಂದ ೨೦೧೪ರವರೆಗಿನ ಆ ಪ್ರಶಸ್ತಿ ಅಂತರದ ರಹಸ್ಯ ಬಯಲಿನೊಂದಿಗೆ ಶ್ರಮಕ್ಕೆ ತಕ್ಕ ಫಲ ಶತಸಿದ್ಧ ಎನ್ನುವುದನ್ನು ನಿರೂಪಿಸಿದರು.

ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಆರಂಭ
ಹಲವಾರು ಕಿರುತೆರೆಯ ಶೋಗಳಲ್ಲಿ ರಘು ರಾಮಪ್ಪ ಭಾಗವಹಿಸಿ ಯಶಸ್ಸನ್ನೂ ಕಂಡಿದ್ದಾರೆ. ಇವರು ತೆರೆಯ ಮೇಲೆ ಬಂದ ಮೊದಲ ಶೋ ಪ್ಯಾಟೆ ಮಂದಿ ಕಾಡಿಗ್ ಬಂದ್ರು. ಇದು ಬಹಳ ಹೆಸರನ್ನು ತಂದು ಕೊಟ್ಟ ಶೋ ಇದು. ಇದರ ಯಶಸ್ಸಿನ ನಂತರ ಇವರಿಗೆ ಒಲಿದು ಬಂದದ್ದು ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಕಾರ್ಯಕ್ರಮ. ಅಲ್ಲಿಂದ ಕಿರುತೆರೆಯ ಬಂಧ ಹೆಚ್ಚಾಗುತ್ತಾ ಹೋದಂತೆ ಇವರ ಖ್ಯಾತಿಯೂ ಹೆಚ್ಚುತ್ತಾ ಹೋಯಿತು. ಇವರಿಗೆ ಬಹಳ ತೃಪ್ತಿ ತಂದ ಶೋ ಎಂದರೆ ಲೈಫ್ ಸೂಪರ್ ಗುರು ಏಕೆಂದರೆ ಇದರಲ್ಲಿ ರಘು ರಾಮಪ್ಪನವರು ಭಾಗವಹಿಸಿದ್ದು ಅವರ ತಂದೆ ರಾಮಪ್ಪನವರೊಂದಿಗೆ. ಈ ಅಪ್ಪ-ಮಗನ ಜೋಡಿ ನಿಜಕ್ಕೂ ಸೂಪರ್ ಗುರು ಎನ್ನುವಂತೆ ಮಾಡಿತು ಈ ಶೋ.

ಸಿನಿ ಪಯಣ ಆರಂಭ
ಕಿರುತೆರೆಯ ಯಶಸ್ಸಿನ ನಂತರ ಅವರಿಗೆ ಒಲಿದು ಬಂದದ್ದು ಜಸ್ಟ್ ಪಾಸ್ ಚಿತ್ರ. ಹೆಚ್ಚೇನು ಯಶಸ್ಸಲ್ಲದಿದ್ದರೂ ಹಲವಾರು ವಿಷಯಗಳನ್ನು ತಿಳಿಯಲು ಸಹಾಯಕವಾಗುವುದರೊಂದಿಗೆ ಒಳ್ಳೆಯ ಅನುಭವವನ್ನೂ ಈ ಸಿನಿಮಾ ತಂದುಕೊಟ್ಟಿತು ಎನ್ನುತ್ತಾರೆ ರಘು ರಾಮಪ್ಪ. ಇನ್ನು ಇವರ ಮುಂದಿನ ಚಿತ್ರ ಶತಾಯ ಗತಾಯ, ಇದೊಂದು ನೈಜ್ಯ ಘಟನೆಯಾಧಾರಿತ ಚಿತ್ರವಾಗಿದ್ದು, ಚಿತ್ರೀಕರಣದ ಹಂತದಲ್ಲಿದೆ. ಇದರ ಹಾಡು ಈಗಾಗಲೇ ಸದ್ದು ಮಾಡುತ್ತಿದ್ದು ಬಹಳ ನಿರೀಕ್ಷೆಯನ್ನು ಹೊಂದಿರುವ ಚಿತ್ರವಾಗಿದೆ. ಈ ಚಿತ್ರ ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ರಘು ರಾಮಪ್ಪ. ಇವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎನ್ನುವುದೇ ನಮ್ಮ ಹಾರೈಕೆ.

ಇವರ ದಿನಚರಿ
ಬಾಡಿಬಿಲ್ಡಿಂಗ್ ಅಪ್ಪ ಕೊಟ್ಟ ಬಳುವಳಿಯಾದರೆ ಚಟುವಟಿಕೆಯಿಂದ ಕೂಡಿರುವುದು ಅಮ್ಮನ ಬಳುವಳಿ. ಅಮ್ಮ ಪಿಜಿ ನಡೆಸುತ್ತಾರೆ, ಈಗಾಗಲೇ ಸುಮಾರು ೮೦ ಜನರನ್ನು ಪಿಜಿಯಲ್ಲಿ ಅಮ್ಮ ಸಾಕಿದ್ದಾರೆ ಮತ್ತು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ಹಾಗಾಗಿ ನನ್ನ ದಿನಚರಿ ಕೂಡ ತುಂಬಾ ಉತ್ಸಾಹದಿಂದ ಕೂಡಿರುತ್ತದೆ. ಬೆಳಿಗ್ಗೆ ಐದಕ್ಕೇ ಎದ್ದು ನನ್ನ ಓಟ್ ಮೀಲ್ಸ್, ಮೊಟ್ಟೆಯ ಶೇಕ್ ಎಲ್ಲವನ್ನೂ ನಾನೇ ತಯಾರು ಮಾಡಿಕೊಂಡು ೬:೩೦ರ ವೇಳೆಗೆ ಜಿಮ್ ಪ್ರಾರಂಭ. ಒಂದೂವರೆಯಿಂದ ಎರಡು ಗಂಟೆ ಕಸರತ್ತು ನಂತರ ಶೂಟಿಂಗ್ ನಂತರ ಸಂಜೆ ನನ್ನ ಫಿಟ್ನೆಸ್ ಕನ್ಸಲ್ಟೆನ್ಸಿ, ಹೀಗೆ ಇರುತ್ತದೆ. ಆದರೆ ಊಟದ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್. ಎಲ್ಲೇ ಹೋದರೂ ನನ್ನ ಊಟ ನನ್ನ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತೇನೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಹೊರಗೆ ಊಟ ಮಾಡಿದರೂ ಅದೂ ಕೂಡ ಆರೋಗ್ಯಕರ ಆಹಾರ ಮಾತ್ರ. ನನಗೆ ಮನೆಯ ಊಟವೇ ಇಷ್ಟ ಮತ್ತು ಅದೇ ಒಳ್ಳೆಯದೂ ಕೂಡ.

ರಘು ರಾಮಪ್ಪನವರ ಸಾಧನೆಯ ಹಾದಿ ಹೀಗೆ ಮುಂದುವರೆಯಲಿ, ಅವರು ಇನ್ನಷ್ಟು ಸಾಧನೆಯ ಶಿಖರವನ್ನೇರಲಿ ಮತ್ತು ನಮ್ಮ ನಾಡಿಗೆ ಕೀರ್ತಿ ತಂದುಕೊಡಲಿ ಎನ್ನುವುದೇ ನಮ್ಮ ಹಾರೈಕೆ ಮತ್ತು ಆಶಯ.