Wednesday, September 18, 2024
Google search engine
Homeಅಂಕಣಗಳುನಮ್ಮೂರ ಸಾಧಕರುನವನಾಯಕ ನವೀನ್ ತೀರ್ಥಹಳ್ಳಿ

ನವನಾಯಕ ನವೀನ್ ತೀರ್ಥಹಳ್ಳಿ

Naveen Thirthalli
Naveen Thirthalli

ಕನಸು ಕಾಣುವವರು ಎಲ್ಲ ಆದರೆ ಅದನ್ನು ನನಸಾಗಿಸಿಕೊಳ್ಳುವವರು ಕೆಲವರು ಮಾತ್ರ. ಕನಸು ಒಮ್ಮೆಲೆ ನನಸಾಗದು, ಅದಕ್ಕೊಂದು ಗುರಿ, ಪರಿಶ್ರಮ, ಸಾಧನೆ, ತಾಳ್ಮೆ, ಪ್ರಯತ್ನ, ಹೀಗೆ ಹಲವಾರು ಸಂಘರ್ಷಗಳು ಬೇಕು. ಇವೆಲ್ಲವನ್ನೂ ಒಗ್ಗೂಡಿಸಿಕೊಂಡು ತನ್ನಂಬಿಕೆಯಿಂದ ಬೆಳೆದು ನಿಂತಿರುವ ಯುವ ನಟ ನವೀನ್ ತೀರ್ಥಹಳ್ಳಿ. ತೀರ್ಥಹಳ್ಳಿಯ ರಂಜದಕಟ್ಟೆಯಲ್ಲಿ ಕೂತು ಕಂಡ ರಂಜಿಸುವ ಕನಸನ್ನು ಗಾಂಧಿನಗರದಲ್ಲಿ ಈತ ನನಸಾಗಿಸಿಕೊಂಡ ಪರಿಯ ಪರಿಚಯ ಇಲ್ಲಿದೆ.

ಹುಟ್ಟಿದ್ದು ಬೆಂಗಳೂರು ಆದ್ರೆ ಹೆಸರು ತೀರ್ಥಹಳ್ಳಿ : ಮೂಲತಃ ತೀರ್ಥಹಳ್ಳಿಯ ಮೇಗರವಳ್ಳಿಯವರಾದ ನವೀನ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಹುಟ್ಟು ಎಲ್ಲಾದರೇನಂತೆ ಬೆಳೆದು ಬದುಕು ಕಲಿಯೋ ಊರೇ ನಮ್ಮೂರು ಅನ್ನೋದು ನವೀನ್ ಪಾಲಿಗೆ ಅಕ್ಷರಶಃ ಸತ್ಯ. ಅಪ್ಪನ ಕೈ ಹಿಡಿದು ನಡೆಯಬೇಕಿದ್ದ ಪುಟ್ಟ ಕಂದ ಹಿಂದಿರುಗಿ ತೊದಲು ನುಡಿಯಲ್ಲಿ ಅಪ್ಪ ಎನ್ನುವ ಹೊತ್ತಿಗೆ ಅವರು ನೆನಪು ಮಾತ್ರ ಎನ್ನುವುದು ಕಹಿಸತ್ಯವಾಗಿತ್ತು. ಆದರೆ ಇವರನ್ನು ಒಂಟಿಯಾಗಿ ಬಿಡದೆ ಸಲಹಿದ್ದು ಇವರ ಅಜ್ಜಿ ಮನೆ, ಹೌದು ತೀರ್ಥಹಳ್ಳಿಯಲ್ಲಿದ್ದ ಅಜ್ಜಿ, ತಾಯಿ ಶಾಂತ ಹಾಗೂ ಅವರಿದ್ದ ಒಟ್ಟು ಕುಟುಂಬದ ಸದಸ್ಯರು ಎಲ್ಲರೂ ನವೀನ್‌ಗೆ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತು ಬೆಳೆಸಿದರು. ತೀರ್ಥಹಳ್ಳಿಯ ರಂಜದಕಟ್ಟೆಯ ಬಾಳೇಕೊಪ್ಪದಲ್ಲಿ ಬಾಲ್ಯದಿಂದ ಯೌವ್ವನದವರೆಗೆ ಬೆಳೆದ ಕಾರಣ, ಬದುಕು ಕಲಿತ ಕಾರಣ ಇವರು ನವೀನ್ ತೀರ್ಥಹಳ್ಳಿ.
ಬಣ್ಣದ ಗೀಳು : ನಾನು ಹೀರೋ ಆಗ್ಬೇಕು ಅಂತ ಯುವಕರು ಹೇಳೋದು ವಯೋಸಹಜ ಆದರೆ ನವೀನ್ ಪುಟ್ಟಪೋರನಾಗಿದ್ದಾಗಲೇ ಈ ಕನಸು ಕಂಡಿದ್ದರು. ಶಾಲಾ-ಕಾಲೇಜಿನ ವೇದಿಕೆಗಳು ಇವರ ಪುಟ್ಟ ಕನಸಿಗೆ ರೆಕ್ಕೆ ಹಚ್ಚಿದವು. ಒಂದೆಡೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಅನ್ನೋ ಆಸೆ ಆದರೆ ಮತ್ತೊಂದೆಡೆ ಸಿನಿಮಾ ಗೀಳು, ಕೊನೆಗೆ ಇವರನ್ನು ಬರಸೆಳೆದದ್ದು ಬಣ್ಣದನಾಡು. ಬಣ್ಣದನಾಡು ಕರೆಯಿತಾದರೂ ಪದವಿ ಪಡೆಯದೆ ಅತ್ತ ವಾಲಲಿಲ್ಲ. ಪದವಿ ಮುಗಿಸಿ ಕೆಲಸಕ್ಕೆ ಸೇರಿದ ನವೀನ್ ದುಡಿಯುತ್ತಲೇ ತಮ್ಮ ಆಸೆಗೆ ತಾವೇ ಊರುಗೋಲಾದರು.
ಗೀಳಿದ್ರೆ ಸಾಕೇ : ಸಿನಿಮಾ ಗೀಳು ಬಹಳಷ್ಟು ಯುವಕ-ಯುವತಿಯರನ್ನು ಕಾಡುತ್ತದೆ, ಆದರೆ ಗೀಳೊಂದಿದ್ದರೆ ಸಾಕೆ, ಖಂಡಿತ ಇಲ್ಲ. ಅದಕ್ಕೆ ಸರಿಯಾದ ತಯಾರಿ ಅತ್ಯಂತ ಅವಶ್ಯಕ. ನಾಯಕನಾಗುವ ಆಸೆ ಹೊತ್ತು ಬಂದ ನವೀನ್‌ರ ಮೊದಲ ಹೆಜ್ಜೆ ನಟನೆಯತ್ತ ಅಲ್ಲ, ಬದಲಾಗಿ ಕಲಿಕೆಯತ್ತ. ನಾಟ್ಯ, ನಟನೆ, ಕರಾಟೆ, ಜಿಮ್ ಹೀಗೆ ಹತ್ತು ಹಲವು ಮಜಲುಗಳಲ್ಲಿ ತನ್ನನ್ನು ತಾನು ತಯಾರಿ ಮಾಡಿಕೊಳ್ಳದೆ ಏಕಾಏಕಿ ನಟನೆಗೆ ಧುಮುಕುವುದು ಒಳ್ಳೆಯದಲ್ಲ ಎಂದು ಇವರು ಅರಿತುಕೊಂಡಿದ್ದರು. ನಟನೆಯನ್ನು ಮತ್ತಷ್ಟು ಬಲಗೊಳಿಸಿದ್ದು ನಾಟಕರಂಗ. ಒಂದು ಹಂತದ ತಯಾರಿಯನ್ನು ಇವರು ಒರೆ ಹಚ್ಚಿ ನೋಡಿದ್ದು ಕಿರುತೆರೆಯಲ್ಲಿನ ನಿರೂಪಣೆ ಮತ್ತು ಕಿರುಚಿತ್ರಗಳಲ್ಲಿನ ನಟನೆಯಿಂದ.
ಘಟಾನುಘಟಿಗಳ ಗರಡಿಯಲ್ಲಿ ನವೀನ್ :
ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೂಡಾಚಾರಿ ಐ ಆಮ್ ಸಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ನವೀನ್ ಕಿರುತೆರೆಯ ಮೇಲ್ಪಂಕ್ತಿಯ ನಿರ್ದೇಶಕರಾದ ಟಿ.ಎನ್.ಸೀತಾರಾಂರವರು ಸೇರಿದಂತೆ ಹಲವರ ಗರಡಿಯಲ್ಲಿ ಪಳಗಿದ ಪ್ರತಿಭೆ. ಮುಕ್ತ ಮುಕ್ತ, ರಾಧಾಕಲ್ಯಾಣ, ಮಹಾಭಾರತ, ವಸುಧೈವ ಕುಟುಂಬಕಮ್, ಪಲ್ಲವಿ ಅನುಪಲ್ಲವಿ ಹೀಗೆ ಹತ್ತು ಹಲವು ಧಾರಾವಾಹಿಗಳಲ್ಲಿ ನಟಿಸುತ್ತಾ ಹಂತ ಹಂತವಾಗಿ ಮೇಲೇರಿದರು ನವೀನ್.
ಪೋಷಿಸಿ ಪೊರೆದ ಪೋಷಕ ಪಾತ್ರಗಳು : ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಅಡಿಯಿಟ್ಟ ನವೀನ್ ಎಸ್.ನಾರಾಯಣ್‌ರ ನಿರ್ದೇಶನದ ದುಷ್ಟ ಚಿತ್ರದಲ್ಲಿ ಅಭಿನಯಿಸಿದರು. ಮಂಜಿನ ಹನಿ ಚಿತ್ರದಲ್ಲಿ ರವಿಚಂದ್ರನ್‌ರವರ ಜೊತೆ ನಟಿಸಿದ್ದು ಅವರೆಂದೂ ಮರೆಯಲಾಗದ ಅನುಭವ ಎನ್ನುತ್ತಾರೆ ನವೀನ್. ಒಮ್ಮೆ ಆರಾಧ್ಯ ದೈವ ಅಂತ ಪೂಜಿಸುತ್ತಿದ್ದ ನನ್ನ ನೆಚ್ಚಿನ ನಟ, ನಿರ್ದೇಶಕ ಒಂದು ತುಣುಕು ಸನ್ನಿವೇಶದಲ್ಲಾಗಲಿ ನನಗೆ ಮಾರ್ಗದರ್ಶನ ನೀಡಿ ನಟನೆ ಹೇಳಿಕೊಟ್ಟರಲ್ಲ, ನೆನೆಸಿಕೊಂಡ್ರೆ ಈಗಲೂ ರೋಮಾಂಚನ ಆಗುತ್ತೆ ಅಂತಾನೆ ಅವರ ಅನುಭವ ಹಂಚಿಕೊಂಡರು ನವೀನ್. ಇಷ್ಟೇ ಅಲ್ಲದೆ ಅಗ್ನಿಮುಷ್ಟಿ, ಆಟ ಹಾಗೂ ಇನ್ನೂ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಕೂಡ ಇವರ ಪಾಲಾಯಿತು.
ನವನಾಯಕನಾದ ನವೀನ್ ತೀರ್ಥಹಳ್ಳಿ :
ಪೋಷಕ ಪಾತ್ರದಿಂದ ನಾಯಕನ ಪಾತ್ರಕ್ಕೆ ಭಡ್ತಿ ಪಡೆದ ನವೀನ್ ನಟಿಸಿದ್ದು ಕೌರ್ಯ ಚಿತ್ರದಲ್ಲಿ. ಇವರ ನಟನಾ ಕೌಶಲ್ಯಕ್ಕೊಂದು ಸವಾಲು ಒಡ್ಡಿದ ಚಿತ್ರ ಕೌರ್ಯ. ಹೊಸ ತಂಡ, ವಿಭಿನ್ನ ಕಥಾ ಹಂದರ ಮತ್ತು ಪ್ರೇಕ್ಷಕರಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಚಿತ್ರವಾಗಿದ್ದು ನವೀನ್ ವೃತ್ತಿ ಬದುಕಲ್ಲಿ ಇದೊಂದು ಮೈಲಿಗಲ್ಲಾಗಬಲ್ಲ ಚಿತ್ರ. ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರ ಕೆಲವೇ ತಿಂಗಳುಗಳಲ್ಲಿ ಜನರ ಮುಂದೆ ಬರಲಿದೆ.
ಕೌರ್ಯದಿಂದ ಕರಿಗಂಬಳಿಯಲ್ಲಿ ಮಿಡಿನಾಗದವರೆಗೆ :
ಕೌರ್ಯ ಕೆಲವು ಕಾರಣಗಳಿಂದ ಸ್ವಲ್ಪ ಮುಂದೂಡಲ್ಪಟ್ಟ ಸಮಯದಲ್ಲಿ ನವೀನ್‌ರನ್ನು ಅರಸಿ ಬಂದದ್ದು ಕರಿಗಂಬಳಿಯಲ್ಲಿ ಮಿಡಿನಾಗ ಚಿತ್ರ. ಪ್ರಸಿದ್ಧ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥ್‌ರ ನಿರ್ದೇಶನದ ಚಿತ್ರವಿದು. ನವೀನ್‌ರನ್ನು ಕಂಡ ಕೂಡಲೇ ಇವರು ಆ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ, ಇವರೇ ನನ್ನ ಸಿನಿಮಾದ ಹೀರೋ ಎಂದೇ ಬಿಟ್ಟರು ಯಂಡಮೂರಿಯವರು. ನವೀನ್‌ರ ಇಷ್ಟು ವರ್ಷಗಳ ಶ್ರಮ, ತಿದ್ದಿ ತೀಡಿದ ಮೈಕಟ್ಟು, ನಟನಾ ಪ್ರಾವೀಣ್ಯತೆ ಇವೆಲ್ಲವಕ್ಕೂ ಸಂದ ಗೆಲುವು ಎಂದರೆ ಅತಿಶಯೋಕ್ತಿಯಲ್ಲ. ಈಗಾಗಲೇ ಯಂಡಮೂರಿಯವರ ಕಾದಂಬರಿಗಳಾದ ತುಳಸಿ ದಳ, ಬೆಳದಿಂಗಳ ಬಾಲೆ ಚಿತ್ರಗಳಾಗಿ ಕನ್ನಡ ಚಿತ್ರರಂಗದಲ್ಲಿ ಯಾರೂ ಮರೆಯಲಾಗದ ಸಿನಿಮಾಗಳಾಗುವುದರ ಜೊತೆಗೆ ಇತಿಹಾಸಬರೆದ ಚಿತ್ರಗಳು. ಈ ಸಾಲಿಗೆ ಹೊಸ ಸೇರ್ಪಡೆ ಕರಿಗಂಬಳಿಯಲ್ಲಿ ಮಿಡಿನಾಗ. ಹೆಸರು ಅವರ ಕಾದಂಬರಿಯದ್ದೇ ಆದರೂ ಕಥೆ ಮಾತ್ರ ವಿಭಿನ್ನ. ಒಬ್ಬ ಮುಸ್ಲಿಂ ಹುಡುಗ ಮತ್ತು ಒಬ್ಬ ಹಿಂದು ಹುಡುಗಿಯ ಪ್ರೇಮಕಥೆ ಜೊತೆಗೆ ಆಕ್ಷನ್ ಸಿನಿಮಾ ಕೂಡ ಆಗಿದೆ. ನವೀನ್‌ರಿಗೆ ಇದರಲ್ಲಿ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ. ಒಂದಷ್ಟು ಲವ್, ಭರಪೂರ ಆಕ್ಷನ್, ಭಯೋತ್ಸಾದಕರ ವಿರುದ್ಧ ಹೋರಾಟ, ಊಹಿಸಿರದ ಹತ್ತು ಹಲವು ಟ್ವಿಸ್ಟ್, ಅದು ಯಂಡಮೂರಿಯವರ ಟ್ವಿಸ್ಟ್‌ಗಳೆಂದರೆ ಪ್ರೇಕ್ಷಕರು ಕುರ್ಚಿಯ ತುದಿಯಲ್ಲಿ ಉಗುರು ಕಚ್ಚುತ್ತಾ ನೋಡುವುದರಲ್ಲಿ ಅನುಮಾನವಿಲ್ಲ, ಇವೆಲ್ಲದರ ಜೊತೆಗೆ ನವೀನ್‌ರಿಗೆ ತಮ್ಮ ಅಭಿನಯ ಸಾಮರ್ಥ್ಯ ಪ್ರದರ್ಶಿಸಲು ಅತ್ಯಂತ ಸೂಕ್ತ ವೇದಿಕೆ. ಸಿಕ್ಕ ಅವಕಾಶವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ನವೀನ್. ಹೊಸ ಭರವಸೆಯನ್ನು ಕನ್ನಡ ಪ್ರೇಕ್ಷಕರಲ್ಲಿ ಮೂಡಿಸಿರುವ ಈ ನಟನ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ನವೀನ ಕನಸುಗಳನ್ನು ಹೊತ್ತಿರುವ ಈ ನವನಾಯಕನಿಗೆ ನವರಸಗಳೂ ಹೀಗೆ ಒಲಿಯುತಿರಲಿ, ನವನವೀನ ಅವಕಾಶಗಳು ಇವರನ್ನು ಹುಡುಕಿಕೊಂಡು ಬರಲಿ ಮತ್ತು ಯಶಸ್ಸು ಇವರ ಪಾಲಾಗಲಿ ಎನ್ನುವುದೇ ನಮ್ಮ ಹಾರೈಕೆ.

RELATED ARTICLES
- Advertisment -
Google search engine

Most Popular

Recent Comments