ಲೇಖನ :ಸೌಮ್ಯ ಗಿರೀಶ್
ಸ್ವರ ಸರದಾರ ಅಜನೀಶ್ ಲೋಕನಾಥ
ಸಂಗೀತ ನಿರ್ದೇಶನದಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸದ್ದಿಲ್ಲದೆ ಗೆಲುವಿನ ಗದ್ದುಗೆಯಲ್ಲಿ ಭದ್ರವಾಗಿ ಕುಳಿತಿರುವ ಭದ್ರಾವತಿಯ ಯುವಕ ಅಜನೀಶ್ ಲೋಕನಾಥ್. ‘ಶಿಶಿರ’ದಿಂದ ಸಂಗೀತ ನಿರ್ದೇಶನ ಆರಂಭಿಸಿದ ಇವರು ಇಂದು ‘ಕಿರಿಕ್ ಪಾರ್ಟಿ’ಯಿಂದ ಪಡ್ಡೆಗಳ ಮನಗೆಲ್ಲುವವರೆಗೂ ಬೆಳೆದುನಿಂತಿರುವ ಬಗೆಯ ಪರಿಚಯ, ಇವರ ಸಂಗೀತದ ಪಯಣ ಇಲ್ಲಿದೆ.
ಭದ್ರಾವತಿಯಲ್ಲಿನ ಸಂಗೀತಮಯ ಬಾಲ್ಯ
ಅಆಇಈ.. ಕಲಿಯಬೇಕಾದ ವಯಸ್ಸಿನಲ್ಲಿ ಅಜನೀಶ್ ಕಲಿತದ್ದು ಸರಿಗಮ…., ಮನೆಯ ವಾತಾರಣವೇ ಸಂಗೀತಮಯ ಹಾಗಾಗಿ ಸಂಗೀತದ ನಂಟು ಬಾಲ್ಯದಿಂದಲೇ ಆರಂಭ ವಾಗಿತ್ತು. ಒಂದೆಡೆ ಭದ್ರಾವತಿಯ ವಿಶ್ವೇಶ್ವರಯ್ಯ ಇಂಗ್ಲೀಷ್ ಶಾಲೆಯಲ್ಲಿ ಮತ್ತು ಪೇಪರ್ ಟೌನ್ ಹೈಸ್ಕೂಲ್‌ನಲ್ಲಿ ಪಠ್ಯಕ್ರಮದ ಶಿಕ್ಷಣ ಸಾಗಿತ್ತು ಮತ್ತೊಂದೆಡೆ ಸಂಗೀತದ ಭದ್ರ ಬುನಾದಿ ಮನೆ ಯಂಗಳದಲ್ಲೇ ಪ್ರಾರಂಭವಾಗಿತ್ತು. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಗಾಯಕರಾದ ತಂದೆ ಲೋಕನಾಥ್‌ರವರೇ ಪ್ರಥಮ ಸಂಗೀತ ಗುರು, ಜೊತೆಗೆ ಅಜ್ಜಿ ವಸಂತ ಮಣಿ ವೀಣೆ ವಿದ್ವಾನ್ ಹಾಗೂ ತಾಯಿ ಕೂಡ ಗಾಯಕರು, ಹಾಗಾಗಿ ಆಟದಿಂದ ಊಟದವರೆಗೆ, ಮಾತಿನಿಂದ ಚರ್ಚೆಯವರೆಗೆ ಎಲ್ಲವೂ ಸಂಗೀತದ ಕುರಿತಾಗೇ ಇರುತ್ತಿತ್ತು, ಇಂತಹ ಪರಿಸರದಲ್ಲಿ ಬೆಳೆದ ಅಜನೀಶ್‌ರ ತಂದೆಯ ಬಯಕೆ ಎಲ್ಲ ತಂದೆ-ತಾಯಿಯರಂತಿರಲಿಲ್ಲ. “ನೀನು ಓದಿ ವಿದ್ಯಾವಂತ ಆಗ್ಬೇಕು, ನಿನ್ನ ಹವ್ಯಾಸ ಎಲ್ಲಾ ಪಕ್ಕಕ್ಕಿಡು” ಎನ್ನುವ ವರ್ಗಕ್ಕೆ ಸೇರಿದವರಲ್ಲ ಲೋಕನಾಥ್‌ರವರು. ಅವರು ಮಗನಿಗೆ ಬಾಲ್ಯದಿಂದಲೇ ಹೇಳಿದ ಪಾಠ “ನೀನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡ ಬೇಕು. ನೀನೊಬ್ಬ ಸಂಗೀತ ನಿರ್ದೇಶಕನಾಗಿ ಬೆಳೆಯಬೇಕು” ಎಂದು. ಸ್ಫೂರ್ತಿಯ ಸೆಲೆ ಇಷ್ಟು ಬಲವಿದ್ದಾಗ ಬೆಳವಣಿಗೆಯ ಹಾದಿ ನಿಜಕ್ಕೂ ಸರಾಗ.
ಭದ್ರಾವತಿಯಲ್ಲಿ ಸ.ರಿ.ಗ.ಮ ಶಿವಮೊಗ್ಗದಲ್ಲಿ ಡೋ.ರೆ.ಮಿ…
ಸಂಗೀತ ನಿರ್ದೇಶಕನಾಗಲು ಕೇವಲ ಒಂದು ಶೈಲಿಯ ಸಂಗೀತ ಕಲಿತರೆ ಸಾಲದು ಎಂದು ತಿಳಿದಿದ್ದ ಲೋಕನಾಥ್‌ರವರು ತಾವು ಕಲಿಸಿದ್ದ ಸಪ್ತಸ್ವರಗಳಿಗೆ ಪಾಶ್ಚಿಮಾತ್ಯದ ಡೋರೆಮಿಫ ಕೂಡ ಸೇರಬೇಕೆಂಬ ಬಯಕೆಯಿಂದ ಅಜ ನೀಶ್‌ರನ್ನು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ತರಗತಿ ನಡೆಸುತ್ತಿದ್ದ ಪ್ರಖ್ಯಾತ ಸಂಗೀತ ಶಿಕ್ಷಕರಾದ ರಾಜು ಮಾಸ್ತರರ ಬಳಿ ತಂದು ಸೇರಿಸಿದರು. ಅಲ್ಲಿ ಪ್ರಾರಂಭವಾಯಿತು ಅಜ ನೀಶ್‌ರ ವೆಸ್ಟರ್ನ್ ಕ್ಲಾಸಿಕಲ್ ಸಂಗೀತದ ತರಬೇತಿ. “ಅಪ್ಪ ನನ್ನ ಮೊದಲ ಗುರು, ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತಿದ್ದ ನನ್ನ ಸಂಗೀತದ ಪಯಣಕ್ಕೆ ಮತ್ತೊಂದು ಅರ್ಥ ಮತ್ತು ಮಜಲು ಕೊಟ್ಟವರು ರಾಜು ಸರ್. ಅವರು ಕಲಿಸಿದ ವಿದ್ಯೆಯೇ ಇಂದಿನ ನನ್ನ ಸಿನಿಮಾ ಸಂಗೀತಕ್ಕೆ ಸಹಾಯವಾಗುತ್ತಿದೆ ಎಂದರೆ ತಪ್ಪಲ್ಲ” ಎನ್ನುವ ಅಜನೀಶ್ ತಮಗೆ ವಿದ್ಯೆ ಕಲಿಸಿ ದವನ್ನು ನೆನೆದು ಅಭಿನಂದಿಸುವುದನ್ನು ಮರೆಯಲಿಲ್ಲ.
ಪಕ್ಕವಾದ್ಯದಿಂದ ಪಕ್ಕಾ ಸಂಗೀತದವರೆಗೆ
ತಂದೆಯವರ ಸಂಗೀತ ಕಚೇರಿಗಳಲ್ಲೆಲ್ಲಾ ಅಜನೀಶ್‌ರದ್ದೇ ಪಕ್ಕವಾದ್ಯ. ಕೀಬೋರ್ಡ್ ನುಡಿಸುತ್ತಿದ್ದ ಈ ಪೋರ ಹೊಸ ಭರವಸೆ ಮೂಡಿ ಸಿದ್ದು ತನ್ನ ಶ್ರದ್ಧೆಯಿಂದ. ಇವರ ಪಕ್ಕವಾದ್ಯದಲ್ಲಿನ ಪಕ್ವತೆಯನ್ನು ಅರಿತ ಲೋಕನಾಥ್‌ರವರು ಅಜನೀಶ್‌ರಿಗೆ ತೋರಿದ್ದು ಬೆಂಗಳೂರಿನ ದಾರಿ. ಬೆಂಗಳೂರಿನಲ್ಲಿ ತಂದೆಯ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ಸಂಗೀತ ಕಾರ್ಯಕ್ರಮಗಳಲ್ಲಿ ಪಕ್ಕವಾದ್ಯ ನುಡಿಸುತ್ತಿದ್ದ ಇವರಿಗೆ ಸಿಕ್ಕಿದ್ದು ಸಂಗೀತ ನಿರ್ದೇಶಕ ಕೆ.ಕಲ್ಯಾಣ್‌ರವರ ಗರಡಿಯಲ್ಲಿ ಪಳಗುವ ಅವಕಾಶ. ಸಿನಿಮಾ ಸಂಗೀತದ ಪರಿಚಯ, ರೆಕಾರ್ಡಿಂಗ್, ರೀರೆಕಾರ್ಡಿಂಗ್‌ಗಳ ಭಾಷೆ ಕಲಿಯಲು ಇವರಿಗೆ ಇದೊಂದು ಉತ್ತಮ ಅವಕಾಶವಾಯಿತು. “ನನಗೆ ಸಿನಿಮಾ ಸಂಗೀತದ ಭಾಷೆ ಹೇಳಿಕೊಟ್ಟ ಗುರು ಕೆ.ಕಲ್ಯಾಣ್ ಸರ್. ಅವರು ಹುಟ್ಟಿಸಿದ ಆ ಆಸಕ್ತಿಯೇ ಇಂದಿನ ನನ್ನ ಈ ಕೆಲಸಗಳಿಗೆ ಕಾರಣ” ಎನ್ನುತ್ತಾರೆ ಅಜನೀಶ್. ಇಲ್ಲಿಂದ ಪ್ರಾರಂಭ ಇವರ ಸಿನಿಮಾ ಸಂಗೀತದ ನಂಟು.
ಸಿನಿ ಸಂಗೀತದ ಹೊಸ ಋತುಮಾನ ‘ಶಿಶಿರ’
ಅಜನೀಶ್‌ರ ಚೊಚ್ಚಲ ಸಂಗೀತ ನಿರ್ದೇಶನದ ಚಿತ್ರ ‘ಶಿಶಿರ’. ಸಿನಿಮಾ ಅಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲವಾದರೂ ಇವರೊಬ್ಬರಿದ್ದಾರೆ ಎಂದು ಚಿತ್ರರಂಗಕ್ಕೆ ತೋರಿಸಿಕೊಟ್ಟುತು ಅಲ್ಲಿಂದ ಪ್ರಾರಂಭವಾದ ಇವರ ಸಿನಿ ಪಯಣದಲ್ಲಿ ನಂತರ ನಡೆದದ್ದು ಮೈಲಿಗಲ್ಲು ಸೃಷ್ಟಿಸಿದ ಚಿತ್ರಗಳು.
‘ನಾಕ್ ನಾಕ್’ ಎನ್ನುತ್ತಾ ರಾಜ್ಯಪ್ರಶಸ್ತಿಯ ಕದ ತಟ್ಟಿದ ‘ಉಳಿದವರು ಕಂಡಂತೆ’
ನಾಗತಿಹಳ್ಳಿಯವರ ‘ನನ್ ಲೈಫ್ ಅಲ್ಲಿ’ ಚಿತ್ರಕ್ಕೆ ಇವರು ನೀಡಿದ್ದ ಸಂಗೀತವನ್ನು ಕೇಳಿದ್ದ ರಕ್ಷಿತ್ ಶೆಟ್ಟಿಯವರು ಮೊದಲು ಅವಕಾಶ ನೀಡಿದ್ದು ಅವರ ಕಿರುಚಿತ್ರವೊಂದರ ಸಂಗೀತ ನಿರ್ದೇಶನ, ಅದಾದ ನಂತರ ‘ಉಳಿದವರು ಕಂಡಂತೆ’ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಅಜನೀಶ್‌ಗೆ ನೀಡಿದರು. ಪ್ರಯೋಗಾತ್ಮಕ ಚಿತ್ರದ ಜೊತೆಗೆ ‘ಇದು ಹೀಗೆ ಬರಬೇಕು’ ಎನ್ನುವ ಅವರ ಕಲ್ಪನೆಯೇ ಅಜನೀಶ್‌ಗೆ ಸ್ಫೂರ್ತಿಯಾಗಿ ಒಂದು ಅದ್ಭುತ ಸಂಗೀತ ಸೃಷ್ಠಿಯಾಯಿತು. ತುಳುನಾಡ ಸೊಗಡನ್ನು ‘ಘಾಟಿಯ ಇಳೀದು’ ಹಾಡಲ್ಲಿ ಹಿಡಿಯುವುದರ ಜೊತೆಗೆ ಪಾಶ್ಚಿಮಾತ್ಯ ಶೈಲಿಯ ‘ನಾಕ್ ನಾಕ್’ ಹಾಡನ್ನೂ ಸಂಯೋಜಿಸಿರುವ ಕೌಶಲ್ಯವೇ ಇವರ ಚತುರತೆಯನ್ನು ಹೇಳುತ್ತದೆ ಇವರ ಈ ಚಾತುರ್ಯಕ್ಕೆ ಒಲಿದ ಗರಿಯೇ ರಾಜ್ಯಪ್ರಶಸ್ತಿ. ಅಷ್ಟು ಹೊತ್ತಿಗಾಗಲೇ ಮಾಧ್ಯಮ ನೀಡುವ ಕೆ.ಆರ್.ಪುರಂ ಪ್ರಶಸ್ತಿ ಪಡೆದಿದ್ದ ಇವರು, ಇದೇ ಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿಯನ್ನೂ ಸಹ ತಮ್ಮದಾಗಿಸಿಕೊಂಡರು. ವಾಸ್ಕೋಡಿಗಾಮ, ಸಿನಿಮಾ ಮೈ ಡಾರ್ಲಿಂಗ್, ಇಷ್ಟಕಾಮ್ಯ, ಅಕಿರಾ, ಸಿಪಾಯಿ, ಶಿವಣ್ಣ ಅಭಿನಯದ ಶ್ರೀಕಂಠ ಹೀಗೆ ಹತ್ತು ಹಲವು ಚಿತ್ರಗಳು ಅಜನೀಶ್‌ರನ್ನು ಅರಸಿ ಬಂದಿತ್ತು. ‘ನನಗೆ ಅವಕಾಶ ನೀಡಿದವರಿಗೆಲ್ಲಾ ನಾನು ಋಣಿ, ನನದೊಂದು ಐಡೆಂಟಿಟಿಗೆ ಅವಕಾಶ ನೀಡಿದ ರಕ್ಷಿತ್ ಇರಲಿ, ನಂಬಿ ಅವಕಾಶ ನೀಡಿದ ನಾಗತಿಹಳ್ಳಿ ಸರ್ ಇರಲಿ, ನಂಬಿ ಕೆಲಸ ನೀಡಿದ ಅನೂಪ್ ಭಂಡಾರಿಯವರಿರಲಿ ಎಲ್ಲರಿಗೂ ಋಣಿ’ ಎನ್ನುವ ಅಜನೀಶ್ ಹೇಳುವ ಪ್ರಕಾರ ನೂರಾರು ಚಿತ್ರಗಳು ಮಾಡಬಹುದು ಆದರೆ ತನ್ನ ಇಷ್ಟಾರ್ಥ ಪೂರ್ಣಗೊಳಿಸಿದ್ದು ‘ಇಷ್ಟಕಾಮ್ಯ’ ಚಿತ್ರ ಎನ್ನುವುದನ್ನು ಮರೆಯಲಿಲ್ಲ. “ಒಬ್ಬ ಸಂಗೀತ ನಿರ್ದೇಶಕನ ಜೊತೆ ಒಬ್ಬ ಸಂಗೀತಗಾರನಾಗಿ ನಾನು ಯಾವ ರೀತಿಯ ಸಂಗೀತ ಮಾಡಬೇಕೆಂಬ ಬಯಕೆ ಇಟ್ಟುಕೊಂಡಿದ್ದೆನೋ ಅದುವೇ ‘ಇಷ್ಟಕಾಮ್ಯ’. ನನ್ನ ಕನಸು ನನಸು ಮಾಡಿದ ಚಿತ್ರ ಅದು. ಇನ್ನು ಮುಂದೆ ವಿವಿಧ ರೀತಿಯ ಸಂಗೀತ ಪ್ರಯತ್ನಿಸುತ್ತೇನೆ, ಶಾಸ್ತ್ರೀಯದಿಂದ ಹಿಡಿದು, ರ‍್ಯಾಪ್, ಜಾಜ಼್, ಹಿಪ್-ಹಾಪ್, ಎಲ್ಲಾ ಶೈಲಿಯಲ್ಲೂ ಮಾಡಬೇಕು ಎನ್ನುವುದು ನನ್ನ ಆಸೆ’ ಎನ್ನುತ್ತಲೇ ಮನದ ಇಂಗಿತ ತಿಳಿಸಿದರು.
ಯಶಸ್ಸಿನ ರಂಗೇರಿಸಿದ ‘ರಂಗಿತರಂಗ’
ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಇತಿಹಾಸ ಬರೆದ ಚಿತ್ರ ‘ರಂಗಿತರಂಗ’. ಈ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದರು ಅಜನೀಶ್. “ಮೊದಲಿಗೆ ನಾನು ಅನೂಪ್ ಭಂಡಾರಿಯವರ ಶಾರ್ಟ್ ಫಿಲಂ ನೋಡಿದೆ, ತುಂಬಾ ವಿಭಿನ್ನವಾಗಿ, ಅಚ್ಚುಕಟ್ಟಾಗಿತ್ತು. ನಂತರ ‘ರಂಗಿತರಂಗ’ದ ಕಥೆ ಕೇಳಿದೆ. ಇಂತಹ ಚಿತ್ರ ಒಂದು ಹೊಸ ಪ್ರಯತ್ನ. ಇನ್ನು ಇದಕ್ಕೆ ಹಿನ್ನೆಲೆ ಸಂಗೀತ ನೀಡುವುದು ಎಂದರೆ ಒಂದು ಹೊಸ ಅನುಭವ ಹಾಗಾಗಿ ಇದನ್ನು ಒಪ್ಪಿಕೊಂಡೆ” ಎನ್ನುತ್ತಲೇ ಅನುಭವಗಳ ಬುತ್ತಿಯನ್ನು ಬಿಚ್ಚಿಡಲು ಪ್ರಾರಂಭಿಸಿದರು ಅಜನೀಶ್. ಸಿನಿಮಾ ಬಿಡುಗಡೆಯಾದ ಮೊದಲ ದಿನ, ಇವರು ಆರಾಮವಾಗಿ ಮನೆ ಯಲ್ಲಿ ಕುಳಿತಿದ್ದರು, ಹೊಸಬರ ಚಿತ್ರ, ಹೊಸ ಪ್ರಯತ್ನ, ಜನ ನಿಜಕ್ಕೂ ಸ್ವೀಕರಿಸುತ್ತಾರೆ ಎಂಬ ನಂಬಿಕೆಯೂ ಅಷ್ಟು ಬಲವಾಗಿರಲಿಲ್ಲ. ಸಿನಿಮಾ ಪ್ರದರ್ಶನ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಇವರ ಮೊಬೈಲ್‌ನಲ್ಲಿ, ಟ್ವಿಟ್ಟರ್‌ನಲ್ಲಿ, ಫೇಸ್ಬುಕ್‌ಗಳಲ್ಲಿ ಮೆಸೇಜುಗಳ ಸರಮಾಲೆ. ಇವರಿಲ್ಲಿ ತಬ್ಬಿಬ್ಬು, ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಾಗಲೇ ಇವರ ಸಂಗೀತ ಪ್ರೇಕ್ಷಕರ ಮನಗೆದ್ದಿತ್ತು. ತಕ್ಷಣವೇ ಥೇಟರ್‌ನತ್ತ ದೌಡಾಯಿಸಿದ ಇವರ ನಾಗಾಲೋಟ ಇವರನ್ನು ಪ್ರತಿಷ್ಠಿತ ಐಫಾ ಪ್ರಶಸ್ತಿ ಪಡೆಯುವವರೆಗೂ ಬೆಳೆಸಿತು. ಈ ಪ್ರಶಸ್ತಿ ಕರ್ನಾಟಕದ ಮಟ್ಟಕ್ಕೆ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರಗಳಾದ ‘ಬಾಹುಬಲಿ’, ‘ಪ್ರೇಮಂ’, ‘ಕತ್ತಿ’ಯಂತಹ ಚಿತ್ರಗಳನ್ನೂ ಹಿಮ್ಮೆಟ್ಟಿ ಪ್ರಶಸ್ತಿ ತನ್ನದಾಗಿಸಿಕೊಂಡರು ಇವರು.
‘ಅಂದಾನೋ ಅದೃಷ್ಟಾನೋ ಮುಂದೆ ಕೂತಿದೆ’ ಎನ್ನುತ್ತಿರುವ ‘ಕಿರಿಕ್ ಪಾರ್ಟಿ’
ಅಂದದ ಭವಿಷ್ಯ ಮತ್ತು ಅದೃಷ್ಟ ಎರಡನ್ನೂ ಕಟ್ಟಿ ಕೊಟ್ಟಿದೆ ‘ಕಿರಿಕ್ ಪಾರ್ಟಿ’ ಚಿತ್ರ. ಊಹಿಸಿರದಷ್ಟು ಯಶಸ್ಸನ್ನು ಗಳಿ ಸುತ್ತಾ, ಎಲ್ಲಾ ದಾಖಲೆಗಳನ್ನೂ ಮುರಿಯುತ್ತಾ, ಕೋಟ್ಯಂತರ ಕೇಳುಗರನ್ನು ಹುಚ್ಚೆದ್ದು ಕುಣಿಯು ವಂತೆ ಮತ್ತು ಸದಾ ಗುನುಗುಡುವಂತೆ ಮಾಡಿದೆ ‘ಕಿರಿಕ್ ಪಾರ್ಟಿ’ ಚಿತ್ರದ ಹಾಡುಗಳು. ‘ನೀನಿರೆ ಸನಿಹ ನೀನಿರೆ’ ಗೆಲ್ಲೋದು ನಾವೇ ಎನ್ನುತ್ತಾ ನಿರ್ದೇಶಕರು-ನಿರ್ಮಾಪಕರು ಸಾಲು ಗಟ್ಟಿ ಅವಕಾಶ ನೀಡುವುದರಲ್ಲಿ ಸಂದೇಹವಿಲ್ಲವೆನ್ನು ವಷ್ಟರ ಮಟ್ಟಿಗೆ ಗೆದ್ದಿದೆ ಈ ಸಿನಿಮಾದ ಸಂಗೀತ. “ರಿಷಬ್ ಶೆಟ್ಟಿಯವರ ನಿರ್ದೇಶನದ ಜೊತೆಗೆ ರಕ್ಷಿತ್ ಬರವಣಿಗೆ, ಆ ಅಚ್ಚುಕಟ್ಟುತನ, ಹೊಸ ಪ್ರಯತ್ನಕ್ಕೆ ಇದ್ದ ಅವಕಾಶ, ವಿಶಿಷ್ಟ ಶೈಲಿಯ ಹಾಡು ಎಂಥ ಸಂಗೀತ ನಿರ್ದೇಶಕರಿಗಾದರೂ ಹುಮ್ಮಸ್ಸು ತುಂಬುವಂಥದ್ದು. ಈ ಮಟ್ಟಿನ ಯಶಸ್ಸು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯಕ್ಕೆ ಕೂತು ಈ ಸಕ್ಸಸ್‌ನ ಸವಿಯನ್ನು ಸವಿಯುತ್ತಿದ್ದೇನೆ’ ’ ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ಇವರ ಸ್ವರಾನ್ವೇಷಣೆಯ ಪಯಣದಲ್ಲಿ ಹಲವಾರು ರಾಗಮಾಲಿಕೆಗಳು ಹರಿದುಬರಲಿ, ಸ್ವರ ಸರಸ್ವತಿಯ ಆಶೀರ್ವಾದ ಸದಾ ಇವರಮೇಲಿದ್ದು ಯಶಸ್ಸು, ಕೀರ್ತಿಯ ಉತ್ತಂಗಕ್ಕೇರಲಿ ಎನ್ನುವುದೇ ನಮ್ಮ ಹಾರೈಕೆ.