ಶಿವಮೊಗ್ಗ : ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ಎಂದೇಹೆಸರಾದ ಶಿವಮೊಗ್ಗ ದಸರಾಕ್ಕೆ ಕ್ಷಣಗಣನೆ ಶುರುವಾಗಿದ್ದು, ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರುವ ಆನೆಗಳಿಗೆ ಬುಧವಾರ ಸಕ್ರೆಬೈಲಿನಲ್ಲಿ ಶಾಸಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಪೂಜೆ ಸಲ್ಲಿಸಿ ಅಧಿಕೃತವಾಗಿ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಜೃಂಭಣೆಯಿಂದ ನಾಡ ಹಬ್ಬ ಸಾಂಸ್ಕೃತಿಕ ದಸರಾ ಮಾಡಲು ಬುಧವಾರ ಅಧಿಕೃತವಾಗಿ ಅಂಬಾರಿ ಉತ್ಸವ ಮಾಡಲು ಆನೆಗಳಿಗೆ ಪೂಜೆ ಮಾಡಿ ಆಹ್ವಾನ ನೀಡಲಾಗಿದೆ. ಸಾಗರ ಚಾಮುಂಡಿದೇವಿಯನ್ನು ಹೊತ್ತು ಅಂಬಾರಿ ಉತ್ಸವಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತಿದೆ. ಸಾಗರ, ಬಾಲಣ್ಣ, ಬಹದ್ದೂರ್ ಮೂರು ಆನೆಗಳಿಗೂ ಪೂಜೆ ಮಾಡುವುದರ ಮೂಲಕ ಶಿವಮೊಗ್ಗ ದಸರಾ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮೂರು ಆನೆಗಳಲ್ಲೂ ಪಾರ್ಥನೆ ಮಾಡಿದ್ದೇವೆ. ಈಗಾಗಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಇದಕ್ಕೆ ಪೂರ್ಣವಾದಂತಹ ಯೋಚನೆಗಳನ್ನು ಮಾಡಿ, ಅಂಬಾರಿ ಉತ್ಸವಕ್ಕೆ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ.
ಇಂದು ನಾವು ಆಯುಕ್ತರು, ನಗರ ಪಾಲಕೆ ಸದಸ್ಯರುಗಳು, ನಾಗರೀಕರು, ಈ ಒಂದು ಉತ್ಸವಕ್ಕೆ ಆಹ್ವಾನ ಕೊಡಲು ಬಂದಿದ್ದು, ಆಹ್ವಾನ ಕೊಟ್ಟಿದ್ದೇವೆ. ಅ.12 ರ ಅಂಬಾರಿ ಉತ್ಸವ ಅದ್ದೂರಿಯಾಗಿ ಆಗುತ್ತದೆ ಎಂಬುದಕ್ಕೆ ಇವತ್ತಿನ ಪೂಜೆ ಸಾಕ್ಷಿಯಾಗಿದೆ ಎಂದು ಭಾವಿಸುತ್ತೇನೆ ಎಂದರು.
ಈ ಬಾರಿಯ ಜಂಬು ಸವಾರಿ ಎಂದಿನಂತೆ ಸಾಗರ್ ಆನೆ ಮಾಡಲಿದ್ದು, ಈ ಬಾರಿ ಮೂರು ಗಂಡಾನೆಗಳಿವೆ. ಅದಕ್ಕೆ ಪೂರಕವಾಗಿ ಯೋಚನೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ಉತ್ಸವಕ್ಕೆ ಇನ್ನಷ್ಟು ಮೆರಗು ಇದೆ. ಸ್ವಲ್ಪ ವಿಭಿನ್ನವಾಗಿ ಯೋಚನೆ ಮಾಡಿದ್ದಾರೆ. ಕಳೆದ ಬಾರಿ ಮೂರು ಆನೆಗಳು ಒಟ್ಟಿಗೆ ಬರುತ್ತಿದ್ದವು. ಈ ಬಾರಿ ಒಂದರ ಹಿಂದೆ ಒಂದು ಬರುತ್ತದೆ ಎಂದು ಭಾವಿಸಿದ್ದೇನೆ. ಅಧಿಕಾರಿಗಳ ತೀರ್ಮಾನಕ್ಕೆ ತಕ್ಕಂತೆ ತಂಡಗಳನ್ನು ರಚನೆ ಮಾಡಲಾಗಿದೆ. ವ್ಯವಸ್ಥಿತವಾಗಿ ಆಗಬೇಕಾದಂತಹ ಕಾರ್ಯ. ಹಾಗಾಗಿ ಎಲ್ಲವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲು ಡಾ. ವಿನಯ್, ಡಿಎಫ್, ವಲಯ ಅರಣ್ಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ. ಶಿವಮೊಗ್ಗ ದಸರಾ ಅತ್ಯಂತ ಯಶಸ್ವಿಯಾಗಿ ನಡೆಯಲು ಬೇಕಾದಂತಹ ಯೋಚನೆಗಳನ್ನು ಮಾಡಿದ್ದಾರೆ.
ಸರ್ಕಾರಕ್ಕೆ ನಾವು ಅನುದಾನವನ್ನು ಕೇಳಿದ್ದೇವೆ. ಸರ್ಕಾರ ಅದರದೇ ಇತಿಮಿತಿಗಳಿಂದ ಕೊಡುತ್ತದೆ. ಶಿವಮೊಗ್ಗ ನಗರದ ನಾಗರಿಕರ ಅನೇಕ ಪ್ರಗತಿಪರ ಸಹಕಾರ ಸಂಘಗಳು ಕೂಡ ಇದಕ್ಕೆ ಸಹಕಾರ ನೀಡಿವೆ. ಈ ಹಿಂದೆ ನಗರದ ನಾಗರೀಕರಿಂದ ದೇಣಿಗೆಯನ್ನು ಎತ್ತಿ ದಸರಾಕ್ಕೆ ಹೆಚು ಶಕ್ತಿಯನ್ನು ಕೊಡುವಂತಹದ್ದು ಹಿಂದೆ ನಗರದ ಅಧ್ಯಕ್ಷರಾಗಿದ್ದ ಪುಟ್ಟಪ್ಪ ಅವರ ತಂಡ ಇದೆ. ಅದನ್ನು ಬೆಳಸಿಕೊಂಡು ಬಂದಿದ್ದೇವೆ. ಇರುವಂತಹದರಲ್ಲಿ ಎಲ್ಲೂ ಕೊರತೆ ಆಗದ ಹಾಗೆ ಆಯುಕ್ತರು ಕೂಡ ವಿಶೇಷವಾದ ರೀತಿಯಲ್ಲಿ ಯೋಚನೆ ಮಾಡಿ ಕಾರ್ಯಕ್ಕೆ ಶಕ್ತಿ ಕೊಡುತ್ತಿದ್ದಾರೆ.
ಅ.03 ಅಥವಾ 04 ರಂದು ಆನೆಗಳು ಬರಬಹುದು. ಬೇಗ ಬಂದು ಅಲ್ಲಿ ತಾಲೀಮು ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ತಾಲೀಮು ಜಾಸ್ತಿ ಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ. ಅದಕ್ಕೆ ತಕ್ಕಂತೆ ಪೂರಕ ತಯಾರಿ ನಡೆಸಲಾಗಿದೆ ಎಂದರು.
ಡಿಎಫ್ ಪ್ರಸನ್ನ ಪಟಗಾರ ಮಾತನಾಡಿ, ತಾಲೀಮು ಸುಮಾರು 15-20 ದಿನಗಳಿಂದ ಆಗಿದೆ. ಅ.03 ಅಥವಾ 04 ರಂದು ಸಾಗರ, ಬಾಲಣ್ಣ, ಬಹದ್ದೂರ್ ಮೂರು ಆನೆಗಳು ಹೋಗಲಿದ್ದಾವೆ. ದಿನನಿತ್ಯದ ಫುಡ್‍ನ್ನು ನಾವು ಕೊಡುತ್ತಿದ್ದೇವೆ. ಹೆಚ್ಚುವರಿಯಾಗಿ ಮಹಾನಗರ ಪಾಲಿಕೆ ವತಿಯಿಂದ ಕೊಡಲಾಗುತ್ತದೆ. ಕ್ಯಾಂಪ್‍ನಲ್ಲಿ ಒಟ್ಟು 4 ಹೆಣ್ಣು ಆನೆಗಳಿದ್ದು, ಅದರಲ್ಲಿ 3 ಹೆಣ್ಣು ಆನೆಗಳ ಜೊತೆ ಮರಿ ಆನೆಗಳಿದ್ದಾವೆ. ಒಂದು ಗರ್ಭಾವತಿ ಆನೆ ಇದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಆನೆ ಮಾಹುತರು ಉಪಸ್ಥಿತರಿದ್ದರು.